ಮೌಲಾನ ಆಜಾದ್ ಮಾದರಿ ಶಾಲೆ ಕಟ್ಟಡ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಿ, ಬೇರೆ ಕಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಶಿರಸ್ತೇದಾರ ರಮೇಶ ಮನವಿ
ಕಂಪ್ಲಿ 10: ಸಕ್ಕರೆ ಕಾರ್ಖಾನೆಯ ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲು ಮುಂದಾಗಿರುವ ಮೌಲಾನ ಆಜಾದ್ ಮಾದರಿ ಶಾಲೆ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ಶಾಲಾ ಅಭಿವೃದ್ಧಿ ಸ್ಥಳೀಯ ಮುಖಂಡರು, ಹಳೇ ವಿದ್ಯಾರ್ಥಿಗಳು ಪಟ್ಟಣದಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿ, ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ರಮೇಶ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಹಿರಿಯ ಮುಖಂಡ ಅರವಿ ಬಸವನಗೌಡ ಮಾತನಾಡಿ, ಇಲ್ಲಿನ ಸಕ್ಕರೆ ಕಾರ್ಖಾನೆ ಬಳಿಯಲ್ಲಿ ಈ ಭಾಗದ ಕಲಿಕೆಯ ಹಿನ್ನಲೆ ಹಲವು ದಶಕಗಳ ಹಿಂದೆ ಸರ್ಕಾರಿ ಶಾಲೆಯನ್ನು ಆರಂಭಿಸಿ, ಇಂದಿಗೂ ಶಿಕ್ಷಣ ನೀಡುತ್ತಾ ಮಕ್ಕಳ ಭವಿಷ್ಯ ರೂಪಿಸುತ್ತಿದೆ.ಮಕ್ಕಳ ಆಟಕ್ಕಾಗಿ ಮೈದಾನವಿದೆ. ಆದರೆ, ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಏಕಾಏಕಿಯಾಗಿ ಮೌಲಾನ ಆಜಾದ್ ಮಾದರಿ ಶಾಲೆ ನಿರ್ಮಿಣ ಮಾಡುವುದಕ್ಕೆ ಹೊರಟಿರುವುದು ವಿಪರ್ಯಾಸವಾಗಿದೆ.
ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗೆ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ, ಬೇರೆ ಕಡೆ ಸೂಕ್ತ ಸ್ಥಳ ಗುರುತಿಸಿ, ಶಾಲಾ ನಿರ್ಮಿಸಬೇಕು ಎಂದರು. ಯುವ ಮುಖಂಡ ಎನ್.ಮನೋಜಗೌಡ ಮಾತನಾಡಿ, ಮೌಲಾನ ಆಜಾದ್ ಮಾದರಿ ಶಾಲೆಗೆ ವಿರೋಧವಿಲ್ಲ. ಆದರೆ, ಇಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ಶಾಲೆ ನಿರ್ಮಿಸುತ್ತಿರುವುದು ಸರಿಯಲ್ಲ. ಇಲ್ಲಿ ವಾಸುತ್ತಿರುವ ಪ್ರತಿಯೊಬ್ಬರ ಹಕ್ಕೋತ್ತಾಯ ಆಜಾದ್ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕೆಂಬುದಾಗಿದೆ. ಆಜಾದ್ ಶಾಲೆ ಮುಂಜೂರಾದ ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ನೀಡದೇ, ತಮಗೆ ಇಷ್ಟಬಂದಂತೆ ವರ್ತಿಸುತ್ತಿದ್ದಾರೆ. ಇದರಿಂದ ಇಲ್ಲಿನ ಮಕ್ಕಳಿಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ವಿರೋಧ ಮಾಡಿದಾಗ ಕೂಡಲೇ ಆಜಾದ್ ಮಾದರಿ ಶಾಲೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ, ಮುಂದಿನ ಹೋರಾಟದ ರೂಪರೇಷ ಸಿದ್ಧಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ರಾಜಶೇಖರ್, ಯರಿ್ರಸ್ವಾಮಿ, ಟಿ.ವಿ.ಸುದರ್ಶನರೆಡ್ಡಿ, ಮಲ್ಲಪ್ಪ, ಆದಿ ನಾರಾಯಣಿ, ಸುಂಕಪ್ಪ, ರಬಿಯಾ ನಿಸಾರ್, ಲಲಿತಾ ಸೇರಿದಂತೆ ಎಸ್ಡಿಎಂಸಿಯವರು, ಮುಖಂಡರು, ಹಳೇ ವಿದ್ಯಾರ್ಥಿಗಳು ಇದ್ದರು.