ಪುರಸಭೆ ಸಭಾಭವನದಲ್ಲಿ ನಿರ್ಮಾಣಗೊಂಡ ಸಖಿ ಪಿಂಕ್ ಬೂತ ಮತಗಟ್ಟೆ
ಲೋಕದರ್ಶನ ವರದಿ
ಶಿಗ್ಗಾವಿ 08: ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಗೆ ಶಿಗ್ಗಾವಿ, ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಐದು ಸಖಿ ಬೂತ್ಗಳು ಚಿತ್ರಕಲಾ ಶಿಕ್ಷಕರ ಕುಂಚದಿಂದ ಶೃಂಗಾರಗೊಂಡಿದೆ.
ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ 'ಸಖಿ ಪಿಂಕ್ ಬೂತ್' ಯುವಕರ ಮತಗಟ್ಟೆ, ವಿಶೇಷಚೇತನರ ಮತಗಟ್ಟೆಗಳನ್ನು ತೆರೆಯಲು ಚುನಾವಣೆ ಆಯೋಗ ಸೂಚನೆ ನೀಡಿದ ಬೆನ್ನಲ್ಲೆ ತಾಲೂಕಿನ ಚಿತ್ರಕಲಾ ಶಿಕ್ಷಕರಾದ ಜಿ ಸಿ ಹಿರೇಮಠ, ಎ ಜಿ ಸಿಂಗಟಾಲೂರ, ಆಯ್ ಕೆ ಹಸಬಿ, ಅಂಗಡಿ, ಮಲ್ಲಿಗವಾಡ, ಮಿರಜಕರ ಸೇರಿದಂತೆ ಅನೇಕ ಶಿಕ್ಷಕರು ಆಕರ್ಷಣೀಯ ಗೋಡೆ ಚಿತ್ರಗಳನ್ನು ಬಿಡಿಸಿ, ಬೂತುಗಳು ಅತಿ ಸುಂದರವಾಗಿ ನಿಂತು ಮತದಾರರನ್ನು ಸೆಳೆಯುವಂತೆ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ಸಖಿ ಮತಗಟ್ಟೆ: ಶಿಗ್ಗಾವಿ, ಸುರಪಗಟ್ಟಿ, ಕೊಟ್ಟಿಗೇರಿ ಬಂಕಾಪೂರ, ಹೊಸ ಮೆಳ್ಳಾಗಟ್ಟಿ, ಸವಣೂರ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಸಖಿ ಬೂತುಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿರುವ ಮತಗಟ್ಟೆಯಲ್ಲಿ ಸಖಿ ಬೂತ್ ತೆರೆಯುವಂತೆ ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳು ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳನ್ನು ಗುರುತಿಸಿ, ಪಿಂಕ್ ಬೂತ್ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.
ವಿಶೇಷ ಖಾಳಜಿ: ಅಲ್ಲದೆ ವಿಶೇಷಚೇತನ ಮಹಿಳೆಯರಿಗೆ ಈ ಬೂತ್ಗಳಲ್ಲಿ ಸಾಮಾನ್ಯ ಮತಗಟ್ಟೆಯಲ್ಲಿ ಸಿಗುವ ಸೌಲಭ್ಯಕ್ಕಿಂತ ಹೆಚ್ಚಿನ ಕಾಳಜಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆಯೋಗ ಸೂಚನೆ ನೀಡಿದೆ, ವಿಶೇಷವಾಗಿ ವೀಲ್ ಚೇರ್ ಸಹಾಯದಿಂದ ಆಗಮಿಸುವ ಮಹಿಳೆಯರು, ದೃಷ್ಟಿ ದೋಷ ಸೇರಿದಂತೆ ವಿಶೇಷಚೇತನ ಮಹಿಳೆಯರಿಗೆ ಈ ಪಿಂಕ್ ಬೂತ್ಗಳಲ್ಲಿ ವಿಶೇಷ ಆತಿಥ್ಯ ದೊರೆಯಲಿದೆ. ಇಂಥ ಮಹಿಳೆಯರು ಸರದಿಯಲ್ಲಿ ನಿಲ್ಲದೇ ನೇರವಾಗಿ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿ ಮತದಾನ ಮಾಡುವ ಅವಕಾಶವನ್ನೂ ಪಿಂಕ್ ಬೂತ್ಗಳಲ್ಲಿ ಕಲ್ಪಿಸಲಾಗಿದೆ ಎನ್ನಲಾಗಿದೆ.
*ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಸಖಿ ಬೂತ್ ಮತಗಟ್ಟೆಗಳನ್ನ ನಿರ್ಮಿ ಸಿಲಾಗಿದೆ ಜೊತೆಗೆ ಇಲ್ಲಿ ಮಹಿಳೆಯರೇ ಕಾರ್ಯನಿರ್ವಹಿಸುತ್ತಾರೆ, ಇಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.
-ಸಂತೋಷ ಹಿರೇಮಠ
ಉಪ ಚುನಾವಣಾಧಿಕಾರಿ ಶಿಗ್ಗಾವಿ