ಬೇಸಾಯಶಾಸ್ತ್ರ ಹಾಗೂ ಸಸ್ಯ ಸಂರಕ್ಷಣೆ ವಿಜ್ಞಾನಿಗಳ ಹುದ್ದೆಯನ್ನು ಮಂಜೂರು ಮಾಡಲು ಐ.ಐ.ಆರ್.ಆರ್.ಗೆ ಮನವಿ
ಬೇಸಾಯಶಾಸ್ತ್ರ ಹಾಗೂ ಸಸ್ಯ ಸಂರಕ್ಷಣೆ ವಿಜ್ಞಾನಿಗಳ ಹುದ್ದೆಯನ್ನು ಮಂಜೂರು ಮಾಡಲು ಐ.ಐ.ಆರ್.ಆರ್.ಗೆ ಮನವಿ
ಧಾರವಾಡ 21 :ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಮನಗುಂಡಿ, ಧಾರವಾಡ ಇವರು ಕೃಷಿ ಸಂಶೋಧನಾ ಕೇಂದ್ರ, ಮುಗದ ಶತಮಾನೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ಈ ಸಂಸ್ಥೆಯು ನೂರು ವರ್ಷಗಳನ್ನು ಪೂರೈಸಿರುವುದ ಅತೀ ಹೆಮ್ಮೆಯ ವಿಷಯ. ಈ ಕೇಂದ್ರದಿಂದ ಸಾಕಷ್ಟು ರೈತ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಿಗೆ ಸಾಕಷ್ಟು ಅನುಕೂಲಕರವಾಗಿದೆ. ಈ ಹಿಂದೆ ಕಲಘಟಗಿ ಹಾಗೂ ಉತ್ತರಕನ್ನಡ ಭಾಗಗಳು ಭತ್ತದ ಕಣಜವಾಗಿದ್ದವು. ಈ ಕೇಂದ್ರದಿಂದ ಧಾರವಾಡ ಜಿಲ್ಲೆಯು ಭತ್ತದ ಕಣಜವಾಗಿ ಹೊರಹೊಮ್ಮಿದ್ದು, ಭತ್ತದ ತಳಿಗಳ ಸಂರಕ್ಷಣೆಯಲ್ಲಿ ಸಾಕಷ್ಟು ಶ್ರಮವಹಿಸಿದೆ ಎಂದು ನುಡಿದು ಎಲ್ಲರಿಗೂ ಶುಭ ಕೋರಿದರು. ಮುಖ್ಯ ಅತಿಥಿಗಳಾದ ಡಾ. ಆರ್. ಎಮ್. ಸುಂದರಂ, ನಿರ್ದೇಶಕರು, ಐ.ಸಿ.ಎ.ಆರ್.-ಅಖಿಲ ಭಾರತ ಭತ್ತ ಸಂಶೋಧನಾ ನಿರ್ದೇಶನಾಲಯ, ಹೈದರಾಬಾದ ಇವರು ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಕೇಂದ್ರವು ನೂರು ವರ್ಷಗಳನ್ನು ಪೂರೈಸಿದಕ್ಕಾಗಿ ಶ್ರಮಿಸಿದ ಎಲ್ಲ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಅಭಿನಂದಿಸುತ್ತ, ಈ ಕೇಂದ್ರದಿಂದ ಅಭಿಲಾಷಾ, ಮುಗದ ಸಿರಿ, ಮುಗದ ಸುಗಂದಿ, ಮುಂತಾದ ಭತ್ತದ ತಳಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದುಕೊಂಡಿವೆ ಎಂದು ತಿಳಿಸಿದರು. ಡಾ. ಪಿ. ಎಲ್. ಪಾಟೀಲ ಮಾನ್ಯ ಕುಲಪತಿಗಳು, ಕೃವಿವಿ, ಧಾರವಾಡ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ಈ ಕೇಂದ್ರ ಕಳೆದ ನೂರು ವರ್ಷಗಳಲ್ಲಿ ಅನೇಕ ಭತ್ತದ ತಳಿಗಳನ್ನು ಬಿಡುಗಡೆ ಮಾಡುವಲ್ಲಿ ಶ್ರಮಿಸಿದ ಎಲ್ಲ ವಿಜ್ಞಾನಿಗಳನ್ನು ಸ್ಮರಿಸಿಕೊಂಡರು. ಈ ಕೇಂದ್ರಕ್ಕೆ ಬೇಸಾಯಶಾಸ್ತ್ರ ಹಾಗೂ ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿಗಳ ಹುದ್ದೆಯನ್ನು ಮಂಜೂರು ಮಾಡಲು ಐ.ಐ.ಆರ್.ಆರ್. ಹೈದರಾಬಾದ ಇವರಿಗೆ ಮನವಿ ಸಲ್ಲಿಸಿದರು. ಈ ಕೇಂದ್ರದಿಂದ ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲಕರವಾಗಿದೆ. ಭತ್ತದ ಬೆಳೆಯ ಜೊತೆ ಮಣ್ಣಿನ ಸಂರಕ್ಷಣೆ, ಉಪಕಸುಬುಗಳು ಹಾಗೂ ಸಮಗ್ರ ಕೃಷಿ ಮಾಡಲು ರೈತರಲ್ಲಿ ವಿನಂತಿಸಿದರು. ಈ ಸಂಶೋಧನಾ ಕೇಂದ್ರದ ಹಿಂದಿನ ಮುಖ್ಯಸ್ಥರಾದ ಡಾ. ಜಿ. ಎನ್. ಹನುಮರಟ್ಟಿ, ಪ್ರಾಧ್ಯಾಪಕರು(ಜಿಪಿಬಿ), ಕೃವಿವಿ, ಧಾರವಾಡ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮುಗದ ಸಂಶೋಧನಾ ಕೇಂದ್ರ್ರವನ್ನು 20 ಮೇ, 1923 ರಂದು ಶ್ರೀ ಗಿಲ್ಬರ್ಟ್ ಮತ್ತು ಶ್ರೀ ಸಾಲಿಮಠ್, ಕೃಷಿ ಇಲಾಖೆಯ ಅಧಿಕಾರಿಗಳು, ಬಾಂಬೆ ಪ್ರಾವಿನ್ಸ್, ಪೂನಾ-5ರ ಪ್ರಯತ್ನದಿಂದ ಸ್ಥಾಪಿಸಲಾಯಿತು ಎಂದು ತಿಳಿಸಿದರು. ಕೇಂದ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಆರಂಭಿಕ ದಿನಗಳಲ್ಲಿ ಶ್ರಮವಹಿಸಿದ ವಿಜ್ಞಾನಿಗಳಾದ ಶ್ರೀ ಎಸ್.ಜಿ.ಕೇಳ್ಕರ್, ಶ್ರೀ ಸಿ.ವಿ.ಧೂಳಪ್ಪನವರ್, ಶ್ರೀ. ಬಿ.ಬಿ.ಚೌಧರಿ, ಶ್ರೀ ಎನ್.ಬಿ.ಕಜ್ಜರಿ, ಶ್ರೀ. ಎ. ಕೆ. ಅಯ್ಯಂಗಾರ್ ಮತ್ತು ಶ್ರೀ ಎಂ. ಎಸ್. ಜೋಶಿಯವರನ್ನು ನೆನೆದರು. ಈ ಕೇಂದ್ರವು ಸ್ಥಳೀಯ ಭತ್ತದ ತಳಿಗಳ ಕುರಿತು ಸಂಶೋಧನೆಗೆ ಒಟ್ಟು 35 ಎಕರೆ ಜಮೀನನ್ನು ಹೊಂದಿದ್ದು, 1980 ರಲ್ಲಿ ಎ.ಐ.ಸಿ.ಆರ್.ಪಿ. ಯೋಜನೆಯನ್ನು ಈ ಕೇಂದ್ರಕ್ಕೆ ತರಲಾಯಿತು. ಈ ಕೇಂದ್ರವು ಸುಮಾರು ನೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಸಾವಿರಾರು ರೈತರಿಗೆ ಸಹಾಯವಾಗಿದ್ದು, ಅಮೃತ್, ಮುಗದ ಸುಗಂಧಿ(ಬಾಸುಮತಿ), ಮುಗದ ಸಿರಿ, ಎಮ್.ಜಿ.ಡಿ.-101, ಮುಗದಹಿ01 ನಂತಹ ಉನ್ನತ ತಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ, ಈ ಕೇಂದ್ರವು ವೈಜ್ಞಾನಿಕವಾಗಿ ಡಿ.ಎಸ್.ಆರ್. ತಳಿ ಬಗ್ಗೆ ಸಂಶೋಧನೆ ಕೈಗೊಳ್ಳಲಿ ಎಂದು ಆಶಿಸುತ್ತೇನೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿಗಳನ್ನು ಸನ್ಮಾನಿಸಲಾಯಿತು. ಈ ಕೇಂದ್ರದಲ್ಲಿ ಹಿಂದೆ ಕೆಲಸ ಮಾಡಿದ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ರವಿ ಕಸಮಳಗಿ, ಗ್ರಾಮ ಪಂಚಾಯತ ಅಧ್ಯಕ್ಷರು, ಮುಗದ ಇವರು ಈ ಕೇಂದ್ರವು ನಮ್ಮ ಊರಿನಲ್ಲಿ ಸ್ಥಾಪನೆಯಾಗಿರುವುದು ನಮ್ಮ ಹೆಮ್ಮೆ, ಇದರಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳ ರೈತ ಬಾಂಧವರಿಗೆ ಸಾಕಷ್ಟು ಅನುಕೂಲಕರವಾಗಿದೆ ಎಂದು ತಿಳಿಸಿದರು. ಭತ್ತ ಬೆಳೆಯ ಬಗ್ಗೆ ವಿಚಾರ ಗೋಷ್ಠಿಯನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ರೈತರೊಂದಿಗೆ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿ. ಗೀರೀಶ, ತಳಿವರ್ಧಕರು, ಬೆಂಗಳೂರು ಇವರು ಭತ್ತದ ತಳಿಗಳ ಬಗ್ಗೆ ಮಾತನಾಡುತ್ತ, ನೇರ ಬಿತ್ತನೆಯ ಭತ್ತ ಇತ್ತೀಚಿನ ದಿನಗಳಲ್ಲಿನ ವ್ಯತಿರಿಕ್ತ ಮಳೆಗಾಲದ ಸಂದರ್ಭಗಳಲ್ಲಿ ಒಂದು ವರದಾನವಾಗಿದೆ ಎಂದು ತಿಳಿಸಿದರು. ಡಾ. ವಿ. ವಿ. ಅಂಗಡಿ, ನಿವೃತ್ತ ಬೇಸಾಯಶಾಸ್ತ್ರಜ್ಞರು ಮತ್ತು ಮುಖ್ಯಸ್ಥರು, ಕೃ.ಸಂ.ಕೇ., ಮುಗದ ಇವರು ಕೂರಿಗೆ ಭತ್ತದ ಸಾಗುವಳಿ ಬಗ್ಗೆ ಮಾತನಾಡುತ್ತಾ ಭತ್ತದಲ್ಲಿ ಪೋಷಕಾಂಶಗಳು ಹಾಗೂ ನೀರಿನ ಸದ್ಬಳಕೆ ಮಾಡುವ ವಿವಿಧ ಕ್ರಮಗಳ ಬಗ್ಗೆ ತಿಳಿಸಿದರು. ಅಷ್ಟೇ ಅಲ್ಲದೇ, ವಾರಿ ಭೂಮಿಯಲ್ಲಿ ಭತ್ತದೊಂದಿಗೆ ಹತ್ತಿಯನ್ನು ಅಂತರ ಬೆಳೆಯಾಗಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡಿದರು. ಶಂಕರ ಲಂಗಾಟಿ, ಪಿಪಿವಿ ್ಘ ಎಫ್ಆರ್ಎ ಪ್ರಶಸ್ತಿ ಪುರಸ್ಕೃತ ಪ್ರಗತಿ ಪರ ರೈತರು, ಗುಂಡೇನಟ್ಟ್ಡಿ, ಖಾನಾಪುರ ತಾಲ್ಲೂಕ ಇವರು ಭತ್ತದಲ್ಲಿ ಸ್ಥಾನಿಕ ತಳಿ ಸಂರಕ್ಷಣೆ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು. ಡಾ. ಬಿ. ಡಿ. ಬಿರಾದಾರ, ಸಂಶೋಧನಾ ನಿರ್ದೇಶಕರು, ಕೃವಿವಿ, ಧಾರವಾಡ ಇವರು ಎಲ್ಲಾ ಗಣ್ಯ ಮಾನ್ಯರನ್ನು ಸ್ವಾಗತಿಸಿದರು. ಡಾ. ಜೆ. ಆರ್. ದಿವಾಣ, ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಮುಗದ ಇವರು ವಂದನಾರೆ್ಣ ಮಾಡಿದರು. ಎಲ್ಲಾ ಗಣ್ಯಮಾನ್ಯರು ಶತಮಾನೋತ್ಸವದ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯದ ಉದ್ಘಾಟನೆ ನೆರವೇರಿಸಿದರು. ಮಾನ್ಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ್, ರವಿಕುಮಾರ ಮಾಳಿಗೇರ, ಜಯಕುಮಾರ ಹೆಚ್., ವೀರನಗೌಡ ಪೋಲೀಸಗೌಡರ, ಕೃವಿವಿ ವಿಶ್ರಾಂತ ಕುಲಪತಿಗಳಾದ ಡಾ. ಜೆ. ವಿ. ಗೌಡ, ಡಾ. ಜೆ. ಹೆಚ್. ಕುಲಕರ್ಣಿ, ಡಾ. ಆರ್. ಆರ್. ಹಂಚಿನಾಳ, ಡಾ. ವಿ. ಆಯ್. ಬೆಣಗಿ, ಸ್ಥಳೀಯ ಮುಖಂಡರಾದ ಕಲ್ಲಪ್ಪ ಹಟ್ಟಿ, ಎಸ್. ಐ. ಪಿರಯಾದೆ, ಎಸ್. ಜಿ. ಪಾಟೀಲ, ಸಂಶೋಧನಾ ಪರಿಷತ್ತಿನ ಸದಸ್ಯರು ಮತ್ತು ಸಹ ಸಂಶೋಧನಾ ನಿರ್ದೇಶಕರಾದ ಡಾ. ಪಿ. ಎಸ್. ಮತಿವಾಡೆ ಉಪಸ್ಥಿತರಿದ್ದರು. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಮುಗದ ಸುತ್ತಮುತ್ತಲಿನ ಗ್ರಾಮದ ಸುಮಾರು 200 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.