ರಾಜು ಕಾಗೆ ರವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ವಸತಿ ಯೋಜನೆಯ ಹಕ್ಕುಪತ್ರ ವಿತರಣೆ
ಲೋಕದರ್ಶನ ವರದಿ
ರಾಜು ಕಾಗೆ ರವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ವಸತಿ ಯೋಜನೆಯ ಹಕ್ಕುಪತ್ರ ವಿತರಣೆ
ಕಾಗವಾಡ 21: ಗ್ರಾಮಗಳ ಮುಖಂಡರಗಳು ತಮ್ಮ-ತಮ್ಮ ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಗ್ರಾಮದ ಅಭಿವೃದ್ಧಿಗೆ ಹಾಗೂ ಬಡ ಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುವ ಕೆಲಸ ಮಾಡಿ, ಗ್ರಾಮವನ್ನು ಮಾದರಿ ಗ್ರಾಮ ಮಾಡಲು ಶ್ರಮಿಸಬೇಕೆಂದು ಶಾಸಕರು ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು. ಅವರು ಬುಧವಾರ ದಿ. 20 ರಂದು ತಾಲೂಕಿನ ಕೆಂಪವಾಡ ಗ್ರಾ.ಪಂ. ವ್ಯಾಪ್ತಿಯ ನವಲಿಹಾಳ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಹಳೆ ನವಲಿಹಾಳದಿಂದ ಮೋಳೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ, ಕೆಂಪವಾಡ ಗ್ರಾಮದ ಗಡಿ ಭಾಗದ ರಸ್ತೆ ಕಾಮಗಾರಿ ಹಾಗೂ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯ 75 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ, ಮಾತನಾಡುತ್ತಿದ್ದರು. ಮತಕ್ಷೇತ್ರದ 72 ದೇವಸ್ಥಾನಗಳಿಗೆ 25 ಲಕ್ಷ ರೂಪಾಯಿಗಳ ಸಮುದಾಯ ಭವನ ಮತ್ತು 50 ಗ್ರಾಮಗಳಿಗೆ ತಲಾ 25 ಲಕ್ಷ ರೂ.ಗಳ ಅನುದಾನದ ರಸ್ತೆ ಕಾಮಗಾರಿಗೆ ವಿಶೇಷ ಅನುದಾನ ಮಂಜೂರಾಗಿದೆ. ಅದರಂತೆ ಪ್ರತಿ ಗ್ರಾಮಕ್ಕೂ ಕೂಡಾ ಹೆಚ್ಚಿನ ಅನುದಾನ ತಂದು, ಹಂತ ಹಂತವಾಗಿ ಅವಶ್ಯಕ ಇರುವ ರಸ್ತೆಗಳನ್ನು ಹಾಗೂ ಗಟಾರಗಳ ನಿರ್ಮಾಣ ಮಾಡಿ, ಗ್ರಾಮಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು. ಈ ಸಮಯದಲ್ಲಿ ಪಂಚಾಯತ ರಾಜ್ಯ ವಿಭಾಗದ ಎಇಇ ವೀರಣ್ಣಾ ವಾಲಿ, ತಾ.ಪಂ. ಎಓ ಸುರೇಶ ಕದ್ದು, ಗುತ್ತಿಗೆದಾರರಾದ ಶಿವಾನಂದ ಗೊಲಭಾವಿ, ಬಸವರಾಜ ನಾವ್ಹಿ, ಪಿಡಿಒ ಸಂಜೀವ ಸೂರ್ಯವಂಶಿ, ಮುಖಂಡರಾದ ಪಿಂಟು ಮಗದುಮ್, ವಿನಾಯಕ ಗಾಳಿ, ಸಾವಂತ ಖಾಂಡೇಕರ, ಶಿವಬಸು ಗಾಳಿ, ಶಂಕರ ಶೆಮಡೆ, ಮಹಾದೇವ ಮಾಳಿ, ಸಿದಗೌಡ ಪಾಟೀಲ, ಶಿದರಾಯ ಗಾಳಿ, ಸಚೀನ ಹೆರವಾಡೆ, ವಿಕಾಸ ಮೋರೆ, ಪ್ರಕಾಶ ಗಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.