ಲೋಕಲ್ ಫೈಟ್ಗೆ ಸಿದ್ಧತೆ: ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಸೂಚನೆ
ಲೋಕದರ್ಶನ ವರದಿ
ಗುಳೇದಗುಡ್ಡ 26: ಮತದಾನದ ಸಂದರ್ಭದಲ್ಲಿ ಯಾವುದೇ ಕಾನೂನುಬಾಹೀರ ಕೃತ್ಯಗಳು ಹಾಗೂ ಅಹಿತಕರ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಸೂಚಿಸಿದ್ದಾರೆ.
ಅವರು ಶನಿವಾರ ಪಟ್ಟಣದ ಸರ್ಕಾರಿ ಬಾಲಕರ ಪಪೂ ಕಾಲೇಜಿನಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡಿದ್ದ ಮಸ್ಟರಿಂಗ್ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸಕರ್ ಅವರೊಂದಿಗೆ ಆಗಮಿಸಿ ವೀಕ್ಷಿಸಿ ಚುನಾವಣಾ ಅಧಿಕಾರಿಗಳಾಗಿರುವ ತಹಸೀಲ್ದಾರ ಡಿ.ಜಿ.ಮಹಾತ್ ಅವರಿಗೆ ಹೇಳಿದರು.
ಡಿ.27 ರಂದು ಜರುಗಲಿರುವ ಎರಡನೆ ಹಂತದ ಗ್ರಾಮಪಂಚಾಯತಿ ಚುನಾವಣೆಗೆ ಕ್ಷಣಗಣನೆ ಇದ್ದೂ, ಭಾನುವಾರ ಜರುಗುವ ಗ್ರಾಪಂ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದರಲ್ಲದೇ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರಲ್ಲದೇ, ಶಾಂತಿ ಸುವ್ಯವಸ್ಥೆಗೆ ಮುಂಜಾಗ್ರತಾ ಕ್ರಮಕೈ ಪೋಲಿಸ್ ಅಧಿಕಾರಿಗಳಿಗೂ ತಿಳಿಸಿದರು. ಸಮಯಕ್ಕೆ ಸರಿಯಾಗಿ ಭಾನುವಾರ ಬೆಳಿಗ್ಗೆ ಚುನಾವಣೆ ನಡೆಸಲು ಮತ್ತು ಸಾಯಂಕಾಲ ಮುಕ್ತಾಯ ಮಾಡುವಂತೆ ತಾಲೂಕಾ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು.
ಮಸ್ಟರಿಂಗ್ ವ್ಯವಸ್ಥೆ: ಶನಿವಾರ ಬೆಳಿಗ್ಗೆ ತಾಲೂಕಾ ಆಡಳಿತ ಮಸ್ಟರಿಂಗ್ ವ್ಯವಸ್ಥೆ ಚನ್ನಾಗಿ ಹಮ್ಮಿಕೊಂಡು ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಒಟ್ಟು ನಾಲ್ಕು ವಿಭಾಗಗಳನ್ನು ತೆರೆದು ಅವುಗಳ ಮೂಲಕ ಮತಗಟ್ಟೆ ಸಿಬ್ಬಂದಿಗೆ ಸಾಮಗ್ರಿ ವಿತರಿಸಿದರು.
ಮತಗಟ್ಟೆ ಅಧಿಕಾರಿಗಳು: ಒಟ್ಟು 55 ಮತಗಟ್ಟೆಗಳಿಗೆ ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ 69 ಪಿಆರ್ಓ, 69 ಎಪಿಆರ್ಓ, 124 ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 262 ಜನ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
ಭದ್ರತಾ ಸಿಬ್ಬಂದಿ : 12 ಗ್ರಾಪಂಗಳ ಒಟ್ಟು 55 ಮತಗಟ್ಟೆಗಳಿಗೆ 2 ಸಿಪಿಐ, 4 ಪಿಎಸೈ, 9 ಎ ಎಸೈ, 64 ಪೋಲಿಸರು, 12 ಜನ ಹೋಂಗಾರ್ಡ್ಗಳನ್ನು ಹೀಗೆ ಒಟ್ಟು ಚುನವಣೆ ಕರ್ತವ್ಯಕ್ಕೆ 91 ಸಿಬ್ಬಂದಿಗಳ ನೇಮಕ ಮಾಡಲಾಗಿದೆ.
ತಾಲೂಕಿನ ಒಟ್ಟು 12 ಗ್ರಾಮ ಪಂಚಾಯತಿಗಳಿಗೆ ಒಟ್ಟು 156 ಸ್ಥಾನಗಳಿದ್ದೂ, 7 ಮತಗಟ್ಟೆಗಳ 32 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದೂ, 124 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ.
ಗ್ರಾಮವಾರು ಮತದಾರರು: ಹಾನಾಪುರ ಎಸ್ಪಿ: 1054 (ಪು) 1050 (ಮ) ಒಟ್ಟು 2104, ಹಳದೂರ: 2267 (ಪು) 2187 (ಮ) ಒಟ್ಟು 4454, ನಾಗರಾಳ ಎಸ್.ಪಿ.: 1016(ಪು) 968 (ಮ) ಒಟ್ಟು 1984, ಪರ್ವತಿ: 828 (ಪು) 798 (ಮ) ಒಟ್ಟು 1626, ಲಾಯದಗುಂದಿ: 1796 (ಪು) 1645(ಮ) ಒಟ್ಟು 3441, ಕೊಟೇಕಲ್: 2080 (ಪು) 1990(ಮ) ಒಟ್ಟು 4070, ಕೆಲವಡಿ: 2378 (ಪು) 2318 (ಮ) ಒಟ್ಟು 4696, ಕಟಗೇರಿ: 2350 (ಪು) 2477 (ಮ) ಒಟ್ಟು 4857, ಜಮ್ಮನಕಟ್ಟಿ: 1561 (ಪು) 1485(ಮ) ಒಟ್ಟು 3046, ಹಂಸನೂರ : 1625 (ಪು) 1690(ಮ) ಒಟ್ಟು 3315, ಹಂಗರಗಿ : 1563 (ಪು) 1485 (ಮ) ಒಟ್ಟು 3048, ಮಂಗಳಗುಡ್ಡ : 2098 (ಪು) 2005 (ಮ) ಒಟ್ಟು 4103 ಮತದಾರರಿದ್ದಾರೆ. ಒಟ್ಟು 12 ಗ್ರಾಪಂಗಳ ಪೈಕಿ 20646 ಪುರುಷ ಮತದಾರರು, 20098 ಮಹಿಳಾ ಮತದಾರರು ಹೀಗೆ ಒಟ್ಟು 40744 ಮತದಾರರು ಭಾನುವಾರ ಮತ ಚಲಾಯಿಸಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.