ರಾಣೆಬೆನ್ನೂರ

ಮೆಕ್ಕೆಜೋಳ, ಸೋಯಾ ಅವರೆ ಬೆಳೆಗಳಲ್ಲಿ ಕೀಟ ಬಾಧೆ: ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಸಲಹೆ

ಮೆಕ್ಕೆಜೋಳ, ಸೋಯಾ ಅವರೆ ಬೆಳೆಗಳಲ್ಲಿ ಕೀಟ ಬಾಧೆ: ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಸಲಹೆ

ರಾಣೇಬೆನ್ನೂರು: ಅ 30 ಮೆಕ್ಕೆಜೋಳ ಬೆಳೆಯು ಬೆಳೆವಣಿಗೆಯ  ಕಾಳುಕಟ್ಟುವ ಹಂತದವರೆಗೆ ಇದ್ದು ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬರುತ್ತಿದ್ದು, ಈ ಹುಳುಗಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿ ಮಾಡುತ್ತವೆ. ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿಯ ಪ್ರಮಾಣವು ಹೆಚ್ಚುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ತಿಂದು ಹಾಕುತ್ತದೆ. ನಿರ್ವಹಣೆ:ಸೈನಿಕ ಹುಳುಗಳ ನಿರ್ವಹಣೆಯನ್ನು ಕಳಿತ ವಿಷಪಾಷಾಣ ಬಳಕೆಯಿಂದ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. 5-8 ಲೀಟರ್ ನೀರಿನಲ್ಲಿ 250ಮಿ.ಲೀ ಮೊನೊಕ್ರೋಟೊಫಾಸ್ 36ಎಸ್.ಎಲ್ ಕೀಟನಾಶಕವನ್ನು 4ಕೆ.ಜಿ ಬೆಲ್ಲದೊಂದಿಗೆ ಬೆರೆಸಿ 50ಕೆ.ಜಿ ಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಕೂಡಿಸಿ ನಂತರ 2ದಿನಗಳವರೆಗೆ ಪ್ಲಾಸ್ಟಿಕ್ ಚೀಲ ಅಥವಾ ಪೀಪಾಯಿಯಲ್ಲಿ ಕಳಿಯಲು ಬಿಡಬೇಕು. ಸಾಯಂಕಾಲದ ಸಯಮದಲ್ಲಿ ಎಕರೆಗೆ 20ಕೆ.ಜಿ ಪ್ರಮಾಣದಲ್ಲಿ ವಿಷಪಾಷಾಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಹುಳುಗಳು ವಿಷಪಾಷಾಣಕ್ಕೆ ಆಕರ್ಷಿತಗೊಂಡು ತಿಂದು ಸಾಯುತ್ತವೆ.ತೆನೆ ಕೊರೆಯುವ ಹುಳುಗಳು ತೆನೆಯಲ್ಲಿ ರೇಷ್ಮೆಯಂತಹ (ಸಿ) ಕೂದಲು ಹಾಗೂ ಕಾಳುಗಳನ್ನುತಿಂದು ಹಾನಿ ಮಾಡುತ್ತವೆ.ನಿರ್ವಹಣೆ: ತೆನೆಗಳಿಗೆ 4ಗ್ರಾಂ ಕಾರ್ಬಾರಿಲ್ ಶೇ 50ರಷ್ಟು ನೀರಿನಲ್ಲಿ ಕರಗುವ ಪುಡಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಪ್ರತಿ ಎಕರೆಗೆ 12ಕೆ.ಜಿ ಮೆಲಾಥಿಯಾನ್ ಶೇ.5ರ ಪುಡಿಯನ್ನು ತೆನೆಗಳ ಮೇಲೆ ದೂಳೀಕರಿಸಬೇಕು.ಸೋಯಾ ಅವರೆ ಬೆಳೆಯು ಹೂವಾಡು ಹಂತದಿಂದ ಕಾಯಿಕಟ್ಟುವ ಹಂತದವರೆಗೆ ಇದ್ದು ಬೆಳೆಯಲ್ಲಿ ಸ್ಪೋಡಾಪ್ಟರಾ ಮರಿ ಹುಳುಗಳು ಎಲೆಯ ಕೆಳಭಾಗದಲ್ಲಿ ಗುಂಪು ಗುಂಪಾಗಿ ಇದ್ದುಕೊಂಡು ಎಲೆಯ ಹಸಿರು ಅಂಶವನ್ನು ಕೆರೆದು ತಿನ್ನುತ್ತವೆ. ಈ ರೀತಿ ಕೆರೆಯುವುದರಿಂದ ಎಲೆಗಳು ಬಿಳಿ ಪರದೆಯಂತೆ ಕಾಣುತ್ತವೆ. ದೊಡ್ಡವಾದಂತೆ ಕೀಡೆಗಳು ಚದುರಿ ಎಲೆ ಮತ್ತು ಹೂಗಳನ್ನು ತಿನ್ನುತ್ತವೆ. ರಾತ್ರಿ ಹೊತ್ತಿನಲ್ಲಿ ಎಲೆ ತಿನ್ನುವ ಈ ಹುಳುಗಳು ಒಂದೆಡೆ ಎಲೆಗಳ ಮೇಲೆ ಸಮನಾಗಿ ರಂಧ್ರ ಕೊರೆದಿರುವ ದೃಶ್ಯ ಕಾಣಸಿಗುತ್ತದೆ. ಬಾಧೆಯು ತೀವ್ರವಾದಾಗ ಎಲೆಯ ದೇಟನ್ನು ಸಹ ಕೀಡೆ ತಿಂದಿರುವುದು ಕಂಡು ಬರುತ್ತದೆ. ನಿರ್ವಹಣೆ: ಸ್ಫೋಡಾಪ್ಟೆರಾ ಹುಳುಗಳ ಹತೋಟಿಗೆ 0.2ಮಿ.ಲೀ ಕೊರಾಂಟ್ರಿನಿಂಟ್ರೋಲ್ 18.5ಎಸ್.ಸಿ ಅಥವಾ 0.5ಮಿ.ಲೀ ಲ್ಯಾಂಬಾಸೆಲೋಥೀನ್ ಅಥವಾ 'ಮಿ.ಲೀ ಬಿ.ಟಿ ದುಂಡಾಣು ಅಥವಾ 2ಮಿ.ಲೀ ಟ್ರೈಜೋಫಾಸ್ 40ಇ.ಸಿ ಅಥವಾ 2ಗ್ರಾ, ಮೆಟಾರೈಝಿಯಂ ರಿಲೈ ಶಿಲೀಂದ್ರವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ಬೆಳೆಗಳ ಕೀಟ ಹತೋಟಿ ಮಾಡಿಕೊಳ್ಳಲು ನಗರ ಸಹಾಯಕ ಕೃಷಿ ನಿರ್ದೇಶಕ ಹೆಚ್‌. ಬಿ. ಗೌಡಪ್ಪಳವರ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ