ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನ ಆಚರಣೆ
ಯರಗಟ್ಟಿ 26: ಸ್ಥಳೀಯ ಅಜೀತಕುಮಾರ ದೇಸಾಯಿಯವರ ಗಾರ್ಡನದಲ್ಲಿ ಬಿಜೆಪಿ ಸವದತ್ತಿ ಘಟಕದ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಜಕಾತಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಇವರು ಭಾರತೀಯ ರಾಜಕಾರಣಿ, ಬಲಪಂಥೀಯ ಚಿಂತಕರು ಹಾಗೂ ಭಾರತೀಯ ಜನಸಂಘದ ನೇತಾರರು. ಭಾರತೀಯ ಜನಸಂಘವು ಬಳಿಕ ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿತು. ದೀನ್ ದಯಾಳ್ಉಪಾಧ್ಯಾಯರು ಏಕಾತ್ಮ ಮಾನವ ವಾದದ ಪ್ರವರ್ತಕರಾಗಿದ್ದರು ಎಂದರು.
ದೀನ್ ದಯಾಳ್ ಉಪಾಧ್ಯಾಯರು ಮೂಲತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದು, ಬಳಿಕ ಭಾರತೀಯ ಜನಸಂಘದ ಸದಸ್ಯರಾಗಿ ನಿಯುಕ್ತರಾದರು.
1967-1968ರ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1937ರಲ್ಲಿ ಸನಾತನ ಧರ್ಮ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯದಲ್ಲಿ ತಮ್ಮ ಸಹಪಾಠಿ ಬಾಲೂಜೀ ಮಹಾಶಬ್ದೆ ಎನ್ನುವವರ ಮುಖಾಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರರನ್ನು ಭೇಟಿಯಾದರು. ಭೇಟಿಯಿಂದ ಸ್ಫೂರ್ತಿಯನ್ನು ಪಡೆದ ಉಪಾಧ್ಯಾಯರು ಸ್ವಯಂ ಸೇವಕನಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು ಹಾಗೂ 1942ರಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ನಿಯುಕ್ತರಾದರು. 1940ರಲ್ಲಿ ರಾಷ್ಟ್ರಧರ್ಮ ಪತ್ರಿಕೆಯನ್ನು ಪ್ರಾರಂಭಿಸಿದರು. ಬಳಿಕ ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳನ್ನು ಪ್ರಾರಂಭಿಸಿದರು.
ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳ ಸಂಪಾದಕರಾಗಿದ್ದ ದೀನ್ ದಯಾಳರು ಲೇಖಕರೂ ಹೌದು. ಚಂದ್ರಗುಪ್ತ ಮೌರ್ಯ ಎಂಬ ನಾಟಕ, ಶಂಕರಾಚಾರ್ಯರ ಜೀವನಚರಿತ್ರೆಯನ್ನು ಬರೆದರು. ಡಾ. ಕೇಶವ ಬಲಿರಾಮ್ ಹೆಡ್ಗೆವಾರರ ಜೀವನಚರಿತ್ರೆಯನ್ನು ಮರಾಠಿ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು.
1968ರಲ್ಲಿ ಮೊಘಲ್ಸಾರಾಯ್ ರೈಲ್ವೆ ನಿಲ್ದಾಣದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ನಿಧನರಾದರು ಎಂದು ಹೇಳಿದರು.
ಅಜೀತಕುಮಾರ ದೇಸಾಯಿ, ಈರಣ್ಣಾ ಚಂದರಗಿ, ಪರ್ವತಗೌಡ ಪಾಟೀಲ, ಡಾ ಶಂಕರಲಿಂಗಪ್ಪ, ಮಹಾಂತೇಶ ಗೂಡಿ, ಚಂದ್ರಶೇಖರ ಅಳಗೂಡಿ, ಗುರು ವಾಲಿ, ಬಸವರಾಜ ಇಂಚಲ, ಆಯ್. ಡಿ. ಪಾಟೀಲ ಸದಾನಂದ ಪಾಟೀಲ, ಶೇಕಪ್ಪ ಹರಳಿ, ಕರೆಪ್ಪ ಪೂಜೇರ, ರವಿ ಪಾಟೀಲ, ಶಿವು ಕುಸಲಾಪುರ, ಶಾಯಿನಷಾ ಭಾಗವಾನ, ಮಾಬುಸಾಬ ನದಾಫ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು