ರಾಣೆಬೆನ್ನೂರ

ನೀರಿನ ಅಭಾವ ನೀಗಿಸಲು ನಗರಸಭೆಯು ಮುಂಜಾಗ್ರತ ಕ್ರಮವಾಗಿ ಸರ್ವ ಸನ್ನದ್ಧರಾಗಿ: ಶಾಸಕ ಕೋಳಿವಾಡ

ನೀರಿನ ಅಭಾವ ನೀಗಿಸಲು ನಗರಸಭೆಯು  ಮುಂಜಾಗ್ರತ ಕ್ರಮವಾಗಿ ಸರ್ವ ಸನ್ನದ್ಧರಾಗಿ: ಶಾಸಕ ಕೋಳಿವಾಡ

ರಾಣಿಬೆನ್ನೂರ:25 ಕುಡಿಯುವ ನೀರು ಪೂರೈಕೆ ಆಗುವ 24*7 ಯೋಜನೆಯ ಮುದೇನೂರ ಬಳಿ ಇರುವ  ತುಂಗಭದ್ರ ನದಿಯ ಜಾಕವಾಲ್ನಲ್ಲಿ ಕೇವಲ  20 ದಿನಗಳಿಗೆ ಆಗುವಷ್ಟು ಮಾತ್ರ ನೀರಿದ್ದು, ನಗರಕ್ಕೆ ಮುಂದಾಗುವ ನೀರಿನ ಅಭಾವ ನೀಗಿಸಲು ನಗರಸಭೆಯು  ಮುಂಜಾಗ್ರತ ಕ್ರಮವಾಗಿ ಸರ್ವ ಸನ್ನದ್ಧವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ  ಹೇಳಿದರು. 

    ನಗರಸಭೆಯ ಸಭಾಂಗಣದಲ್ಲಿ ಬರಗಾಲ ಟಾಸ್ಕಪೋರ್ಸ  ಸಮಿತಿ ಮತ್ತು ನಗರಸಭೆ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಿದ್ದ ನೀರಿನ ಅಭಾವ ನಿವಾರಣೆ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನ ಮುದೇನೂರು ಗ್ರಾಮದ ಬಳಿ ಇರುವ ತುಂಗಭದ್ರಾ ನದಿ ನೀರಿನಿಂದ ನಗರಕ್ಕೆ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆ ಆಗುತ್ತಿದ್ದು, ಈ ಬಾರಿ  ಸದ್ಯ ಮುಂಗಾರು ಕೈಕೊಟ್ಟಿದ್ದರಿಂದ ಹಾಗೂ ನದಿಯಲ್ಲಿ ನೀರಿನ  ಹರಿವಿನ ಪ್ರಮಾಣ ಬಹಳಷ್ಟು ಕಡಿಮೆಯಾಗಿದ್ದು, ಇದರಿಂದ ನಗರದ ನಾಗರಿಕರಿಗೆ ನೀರು ಪೂರೈಕೆಯಲ್ಲಿ ವ್ಯಥೆಯವಾಗಬಹುದು ಎಂದರು. 

    ನೀರು ಪೂರೈಕೆ ಸಂಬಂಧ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಈಗಾಗಲೇ ನಗರದಲ್ಲಿರುವ 342 ಬೋರ್ವ್ಲ್ಗಳ ಪೈಕಿ 160 ಬೋರಗಳನ್ನು ರಿಪೇರಿ ಮಾಡಿದ್ದು, ಇದರ ಮೂಲಕ ನೀರನ್ನು ನಾಗರಿಕರಿಗೆ ನೀಡಲಾಗುವುದು. ಅಗತ್ಯ ಬಿದ್ದರೆ ತುಂಗಭದ್ರ ಜಲಾಶಯದಿಂದ ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ ಮತ್ತಿತರ ನಗರಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ನೀರು ಬಿಡಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಕೋಳಿವಾಡ ಹೇಳಿದರು. 

     ಈಗಾಗಲೇ ಈ ಸಂಬಂಧ ಜಿಲ್ಲೆಯ ಶಾಸಕರುಗಳೊಂದಿಗೆ ನೀರಿನ ಅಭಾವದ ಕುರಿತು ಚರ್ಚೆ ಮಾಡಿರುವೆ. ಇನ್ನು ಸಹ ಅಗತ್ಯವಿದ್ದರೆ ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಹಾವೇರಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಗರದ ನಾಗರಿಕರು ನೀರನ್ನು ಮಿತವ್ಯಯವಾಗಿ ಬಳಸಬೇಕು, ಅನಾವಶ್ಯಕವಾಗಿ ನೀರನ್ನು ವ್ಯಯ ಮಾಡಬಾರದು ದೊಡ್ಡ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಿದ್ದು, ಇದರಿಂದ ನಗರದ ಬೋರವೆಲಗಳಿಗೂ ಅಂತರ್ಜಲ ಮಟ್ಟ ಹೆಚ್ಚಾಗುವುದು ಎಂದರು.

     ಪೌರಾಯುಕ್ತ ಎನ್.ಎಚ್. ಕುಮ್ಮಣ್ಣನವರ ಮಾತನಾಡಿ, ತುಂಗಭದ್ರ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು ನೀರಿಗೆ ಅಡ್ಡಲಾಗಿ ಬಂಡಿಂಗ್ ವ್ಯವಸ್ಥೆ ಸದ್ಯ ಮಾಡಿದರೆ ವ್ಯರ್ಥವಾಗುವುದು. ಸಂದರ್ಭಕ್ಕೆ ತಕ್ಕಂತೆ ಬಂಡಿಂಗ್ ಹಾಕಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡುವುದರ ಮೂಲಕ ನಗರಕ್ಕೆ ನೀರು ಪೂರೈಕೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ, ಸ್ಥಳೀಯ ಶಾಸಕರುಗಳೊಂದಿಗೆ ಮತ್ತು ನಿರಂತರ ನೀರು ಯೋಜನೆಯ ಅಧಿಕಾರಿಗಳೊಂದಿಗೆ, ನಗರಸಭಾ ಸದಸ್ಯರುಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿವರಿಸಿದರು.  

   ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಮಲ್ಲಿಕಾರ್ಜುನ್ ಅಂಗಡಿ,  ಪುಟ್ಟಪ್ಪ ಮರಿಯಮ್ಮನವರ್, ನಾಗರಾಜ್ ಪವಾರ್,  ಶೇಖಪ್ಪ ಹೊಸಗೌಡ್ರು ನೂರಲ್ಲಾ ಖಾಜಿ, ಹಭಿಬುಲ್ಲ ಕಂಬಳಿ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ ಸೇರಿದಂತೆ ಮತ್ತಿತರರು ಸಲಹೆ ಸೂಚನೆ ನೀಡಿದರು. 

   ನಿರಂತರ ನೀರು ಯೋಜನೆಯ ಎಇಇ ರವಿಕುಮಾರ,  ಹಾದಿಮನಿ ಸೇರಿದಂತೆ ನಗರಸಭೆಯ ಅಧಿಕಾರಿಗಳು, ನೀರು ಸರಬರಾಜು ಯೋಜನೆಯ ಅಧಿಕಾರಿಗಳು ಇದ್ದರು.


ಸುದ್ದಿ ಓದಿ