ಗಣಿತ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ: ಶಿಕ್ಷಕ ನಾರಾಯಣ
ಲೋಕದರ್ಶನ ವರದಿ,
ಜಮಖಂಡಿ24: ಗಣಿತ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಶ್ರೀನಿವಾಸ ರಾಮಾನುಜನ್ ಜಗತ್ತು ಕಂಡ ಶ್ರೇಷ್ಠ ಗಣಿತ ತಜ್ಞರಾಗಿ ನಿರಂತರವಾಗಿ ಜನಮಾನಸಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನವೇ ಒಂದು ಗಣಿತವಿದ್ದಂತೆ ಒಳ್ಳೆಯದನ್ನು ಕೂಡಿಸುತ್ತಾ, ಕೆಟ್ಟದ್ದನ್ನು ಕಳೆಯುತ್ತಾ ಸಾಗಬೇಕು. ಗಣಿತ ಲೆಕ್ಕಾಚಾರ ಇಲ್ಲದೇ ಜೀವನ ಸಾಗಿಸುವ ಒಂದು ಮನೆ ದೇಶದಲ್ಲಿ ಇಲ್ಲ. ಗಣಿತ ಕಬ್ಬಿಣದ ಕಡಲೆಯಲ್ಲ, ಕಷ್ಟಪಟ್ಟು ಓದಿದರೆ ಹುರಿಗಡಲೆಯಷ್ಟೇ ರುಚಿಕರ. ರಾಮಾನುಜಂ ಅವರು ಸತತ ಪ್ರಯತ್ನದಿಂದ ಇಂದಿಗೂ ಜನಮಾನದಲ್ಲಿ ಉಳಿದಿದ್ದಾರೆ ಎಂದರು.
ಗಣಿತ ವಿಷಯ ಶಿಕ್ಷಕ ಸಂಗಮೇಶ ಉಟಗಿ ಮಾತನಾಡಿ, ಜಗತ್ತಿಗೆ ಭಾರತ ನೀಡಿದ ಕೊಡುಗೆಗಳಲ್ಲಿ ಶ್ರೀನಿವಾಸ ರಾಮಾನುಜನ್ ಕೊಡುಗೆ ಅಪಾರವಾಗಿದೆ. ಕೇವಲ ಮೂವತ್ತೆರಡನೆಯ ವಯಸ್ಸಿಗೆ ಜಗತ್ತು ತಲೆದೂಗುವ ಸಾಧನೆ ಮಾಡಿದ ಅವರ ಜೀವನ ಅನುಕರಣೀಯ. ವಿದ್ಯಾರ್ಥಿಗಳು ಗಣಿತ ಆಸ್ವಾದಿಸುತ್ತಾ ಕಲಿಯಬೇಕು ಹುಟ್ಟಿನಿಂದ ಸಾಯುವ ತನಕ ಜೀವನಕ್ಕೆ ಗಣಿತ ಅವಶ್ಯಕವಾಗಿದೆ ಎಂದರು.
ಶಿಕ್ಷಕ ಸಂಜೀವ ಝಂಬುರೆ, ವಿದ್ಯಾರ್ಥಿಗಳಾದ ಪುಷ್ಪಾ ಹುದಲಿ, ಸವಿತಾ ಮಟ್ಟಿ ಲಕ್ಷ್ಮಿ ಮಾಳಿ ಸಹಿತ ಹಲವರು ಇದ್ದರು. ಪೂರ್ಣಿಮಾ ಕುರಣಿ, ಸಾವಿತ್ರಿ ಪಕಾಲಿ ಪ್ರಾರ್ಥಿಸಿದರು. ಶಿಕ್ಷಕಿ ಆಸಿಫಾಬಾನು ಮೊಮಿನ್ ನಿರೂಪಿಸಿ-ವಂದಿಸಿದರು.