ರಾಣೇಬೆನ್ನೂರು ನಗರದಲ್ಲಿ ಭಗವಾನ್ ಜೀವೇಶ್ವರ ಜಯಂತೋತ್ಸವ
ರಾಣೇಬೆನ್ನೂರು ೦೧: ನಗರದ ತುಳಜಾಭವಾನಿ ದೇವಸ್ಥಾನದಲ್ಲಿ ಇಂದು ಸ್ವಕುಳ ಸಾಳಿ ಸಮಾಜದ ಮೂಲಪುರುಷ ಭಗವಾನ್ ಶ್ರೀ ಜಿವೇಶ್ವರ ಸ್ವಾಮಿಯ ಜಯಂತಿ ಉತ್ಸವವನ್ನು ಆಚರಿಸಲಾಯಿತು.ಮುಂಜಾನೆ ೬-೩೦ಕ್ಕೆ ಅಭಿಷೇಕ, ಕಾಕಡಾರತಿ, ಪೂಜೆಯ ನಂತರ ಜಿವೇಶ್ವರಸ್ವಾಮಿಯ ಪಾಲಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಮರಳಿತು. ಪಾಲಕಿ ಉತ್ಸವದಲ್ಲಿ ದಾರಿಯುದ್ದಕ್ಕೂ ಮಹಿಳೆಯರು ಭಜನೆಗಳೊಂದಿಗೆ ನೃತ್ಯ ಮಾಡುತ್ತ ಸಾಗಿದ್ದ ದೃಶ್ಯ ಮನೋಹರವಾಗಿತ್ತು. ಪಾಲಕಿ ಉತ್ಸವದ ನಂತರ ಶ್ರೀ ಸ್ವಾಮಿಗೆ ತೊಟ್ಟಿಲು ಉತ್ಸವ, ಮಹಿಳೆಯರಿಗೆ ಉಡಿತುಂಬುವುದು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಶ್ರೀ ಖಂಡಪ್ಪ ರೋಖಡೆ ಇವರು ವಹಿಸಿದ್ದರು ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ತಾರಾಬಾಯಿ ಕ್ಷೀರಸಾಗರ ಹಾಗೂ ಯುವಕ ಮಂಡಳಿಯ ಅಧ್ಯಕ್ಷರಾದ ಭರತ್ ಏಕಬೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕಗಳೊದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಏರ್ಪಡಿಸಲಾಗಿತ್ತು, ನಾಗವೇಣಿ ಪಾಣಿಭಾತೆ ನೇತೃತ್ವದಲ್ಲಿ ರಕ್ಷಾಬಂಧನ ಕಾರ್ಯಕ್ರಮವೂ ಇದೆ ಸಂದರ್ಭದಲ್ಲಿ ನಡೆಯಿತು. ಸ್ವಾಗತ ಭಾರತಿ ಏಕಬೋಟೆ ಹಾಗೂ ವಂದನಾರ್ಪಣೆ ವಿಠ್ಠಲ್ರಾವ್ ಏಕಬೋಟೆ ನೆರವೇರಿಸಿದರು.ಸಮಾಜದ ಹಿರಿಯರಾದ ಶ್ರೀಕಾಂತ ಕ್ಷೀರಸಾಗರ, ರಾಮಕೃಷ್ಣ ತಾಂಬೆ, ನಾರಾಯಣಪ್ಪ ಪಾಣಿಭಾತೆ, ವೆಂಕಟೇಶ ಏಕಬೋಟೆ, ವಿಠ್ಠಲ್ ಏಡಕೆ, ದೇವೆಂದ್ರಪ್ಪ ರೋಖಡೆ, ನಾಮದೇವ ಜಿಂದೆ, ಹರೀಶ ದಿವಟೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.