ಕಾಗವಾಡ ಬಸ್ ನಿಲ್ದಾಣ ಅಸ್ವಚ್ಛತೆಯ ಆಗರ
ತ್ಯಾಜ್ಯ, ಕೊಳಕಿನ ಸಾಮ್ರಾಜ್ಯ, ಮಲ ಮೂತ್ರ ವಿಸರ್ಜನೆಯಿಂದ ಅಸಹನೀಯ ದುರ್ವಾಸನೆ: ನಿರ್ವಹಣೆಯತ್ತ ಸಂಬಂಧಿಸಿದವರು ಹರಿಸಬೇಕಿದೆ ಗಮನ
ಕಾಗವಾಡ 20: ಬಸ್ ನಿಲ್ದಾಣ ಎಂದರೆ ತ್ಯಾಜ್ಯ, ಕೊಳಕು, ದುರ್ವಾಸನೆ, ಅವ್ಯವಸ್ಥೆ ಎನ್ನುವಂತಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಲಿಟ್ಟರೆ ಸಾಕು, ಕೊಳಕು ಕಾಲಿಗೆ ಬಂದು ತಗುಲುತ್ತದೆ. ದುರ್ವಾಸನೆಮೂಗಿಗೆ ಅಂಟಿಕೊಂಡಿರುತ್ತದೆ. ದಿನನಿತ್ಯ ಓಡಾಡುವ ಪ್ರಯಾಣಿಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ. ಸರಕಾರ ಲಕ್ಷಾಂತರ ರೂಪಾಯಿಖರ್ಚು ಮಾಡಿ ಮೂತ್ರಾಲ ಮತ್ತು ಶೌಚಾಲಯ ನಿರ್ಮಿಸಿದರೂ ಸಾರ್ವಜನಿಕರ ಬಳಕೆಗೆ ಬಾರದೆ ಶೌಚಾಲಯ ಮಾತ್ರ ಮುಚ್ಚಿಯೇ ಇರುತ್ತದೆ. ಇದರಿಂದ ಸಾರ್ವಜನಿಕರು ಶೌಚಾಲಯದ ಗೋಡೆಗಳನ್ನು ಮೂತ್ರವಿಸರ್ಜನೆಗೆ ಬಳಸುತ್ತಿರುವದರಿಂದ ಅನಾಗರಿಕರಂತೆ ತೋರುತ್ತಿದೆ. ಬಸ್ ನಿಲ್ದಾಣದ ಸುತ್ತ ಪ್ಲಾಸ್ಟಿಕ್, ಬಟ್ಟೆ, ಸಾರಾಯಿ ಬಾಟಲಿ ತುಂಬಿವೆ. ಇದರಿಂದ ನಿಲ್ದಾಣ ಅನೇಕ ಸಾಂಕ್ರಾಮಿಕ ರೋಗಗಳು ಹಾಗೂ ಸೊಳ್ಳೆಗಳ ಉತ್ಪಾದನೆ ಕೇಂದ್ರವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯತ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ನಿಲ್ದಾಣದ ಒಳಗೆ ಮುಳ್ಳು ಕಂಟಿಗಳು ಬೆಳೆದಿವೆ. ಅದೇ ಸ್ಥಳವನ್ನು ಸಾರ್ವಜನಿಕರು ಬಯಲು ಶೌಚಕ್ಕೆ, ಬಯಲು ಮೂತ್ರ ವಿಸರ್ಜನೆಗೆ ಬಳಸಲಾಗುತ್ತಿದೆ. ಕೆಲ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಅಸಹನೀಯ ದುರ್ವಾಸನೆ ಬೀರುತ್ತಿವೆ.
ಶೌಚಾಲಯ ಸ್ಥಿತಿ: ನಿಲ್ದಾಣದ ಶೌಚಾಲಯ ಇದ್ದರೂ ಉಪಯೋಗಕ್ಕೆ ಬಾರದ ಹಾಗಿದೆ. ಅದರ ಒಳಗಡೆ ಮೂಗಿಗೆ ಬಟ್ಟೆ ಮುಚ್ಚಿಕೊಂಡೇ ಹೋಗಬೇಕು. ಅದರ ನಿರ್ವಹಣೆಯತ್ತ ಸಂಬಂಧಿಸಿದವರು ತೀವ್ರ ನಿರ್ಲಕ್ಷ ವಹಿಸಿದ್ದಾರೆ. ಬಸ್ ನಿಲ್ದಾಣವೆಲ್ಲ ಕೊಳಕು, ಗಲೀಜಿನ ಆಗರವಾಗಿದೆ. ಸಿಬ್ಬಂದಿಯೇ ನಿಲ್ದಾಣದ ಸ್ವಚ್ಛತೆಯನ್ನು ಹದಗೆಡಿಸುತ್ತಿರುವುದು ವಿಪರ್ಯಾಸ. ದೇಶದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಇಲ್ಲಿ ನೋಡಿದರೆ ಸರಕಾರಿ ಸಿಬ್ಬಂದಿಯೇ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳಗಳೆಂದರೆ ಬೇಕಾಬಿಟ್ಟಿ ಬಳಸಿಕೊಳ್ಳುವುದಲ್ಲ. ನಿಲ್ದಾಣದ ಸ್ವಚ್ಛತೆಗೆ ಸಿಬ್ಬಂದಿ ಶ್ರಮಿಸಲಿ. ಇದಕ್ಕೆ ಸಾರ್ವಜನಿಕರೂ ಸಹಕರಿಸಲಿ. ಸಿಬ್ಬಂದಿಗೆ, ಸಾರ್ವಜನಿಕರಿಗೆ ನಾಗರಿಕ ಪ್ರಜ್ಞೆ ಅಗತ್ಯ.
ಕಾಗವಾಡ ಬಸ್ ನಿಲ್ದಾಣದಲ್ಲಿ ಪ್ರತಿ ನಿತ್ಯ ನೂರಾರು ಪ್ರಯಾಣಿಕರು ಬಸ್ಗಾಗಿ ಕಾದು ನಿಂತಿರುವಾಗ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡುವ ಸಾರ್ವಜನಿಕರಿಗೆ ತಿಳಿವಳಿಕೆ ಹೇಳುವುದನ್ನು ಬಿಟ್ಟು ಸಿಬ್ಬಂದಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಸಿಬ್ಬಂದಿ ಎಚ್ಚೆತ್ತುಕೊಂಡು ಸ್ವಚ್ಛತೆಯತ್ತ ಗಮನ ಹರಿಸಲಿ.
-ದಯಾನಂದ ಕಾಂಬಳೆ
ಸಾಮಾಜಿಕ ಕಾರ್ಯಕರ್ತ,
ಕಾಗವಾಡ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿ ಬಂದ ಮಾಡಿರುವುದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಬಯಲು ಪ್ರದೇಶದಲ್ಲಿ ಮಲಮೂತ್ರ ಮಾಡುತ್ತಿದ್ದಾರೆ. ಇದರಿಂದ ದುರ್ವಾಸನೆ ಹರಡುವುದಲ್ಲದೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಈ ಸಾರ್ವಜನಿಕ ಶೌಚಾಲಯಗಳ ಸದ್ಬಳಕೆಗೆ ಅವಕಾಶ ನೀಡಬೇಕು.
-ಅಣ್ಣಾಸಾಬ ತೆಲಸಂಗ,
ಕರವೇ ಅಧ್ಯಕ