ರುದ್ರಾಕ್ಷಿ ಕೀರೀಟ, ಚಿನ್ನದ ಗುಂಡಗಡಿಗಿ, ಶೀರೋ ವಸ್ತ್ರ, ತಾಂಡೊಲೆಗಳ ಹಸ್ತಾಂತರ
ರುದ್ರಾಕ್ಷಿ ಕೀರೀಟ, ಚಿನ್ನದ ಗುಂಡಗಡಿಗಿ, ಶೀರೋ ವಸ್ತ್ರ, ತಾಂಡೊಲೆಗಳ ಹಸ್ತಾಂತರ
ಜಮಖಂಡಿ 20: ಓಲೇಮಠಕ್ಕೆ ಲಕ್ಷಾಂತರ ರೂಪಾಯಿ ಕೊಡುವುದು ಬೇಡ ನೀವೆಲ್ಲರೂ ಮಠದ ಮೇಲೆ ಲಕ್ಷ್ಯ ಇಡಿ ಅದುವೆ ಲಕ್ಷಾಂತರ ರೂಪಾಯಿ ಸಹಾಯ ಮಾಡಿದಂತಾಗುತ್ತದೆಂದು ಓಲೇಮಠದ ನೂತನ ಉತ್ತರಾಧಿಕಾರಿಯಾಗಿ ಕೀರೀಟವನ್ನು ಧರಿಸಿಕೊಂಡ ಆನಂದ ದೇವರು ಹೇಳಿದರು.
ನಗರದ ಓಲೇಮಠದಲ್ಲಿ ನಡೆದ ಲಿ,ಡಾ, ಅಭಿನವಕುಮಾರ ಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಹಾಗೂ ನೂತನ ಮಠಕ್ಕೆ ಉತ್ತರಾಧಿಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮಖಂಡಿ ಓಲೇಮಠಕ್ಕೆ ನಾನು ಹೂ ತರುವ ಕೆಲಸ ಮಾಡುತ್ತೇನೆ, ನಾನು ಜಮಖಂಡಿಯ ಮನೆ ಮಗನಾಗಿ ಸಮಾಜ ಸೇವೆ ಮಾಡುತ್ತೇನೆ, ನನ್ನಲ್ಲಿ ಪೀಠಾಧಿಕಾರಿ ಎನ್ನುವ ಬೇಧ ಇಲ್ಲ, ಇಂದಿನ ಯುವಕರು ದುಶ್ಚಟಗಳಿಂದ ಜೀವನ ಹಾಳು ಮಾಡಿಕೊಳ್ಳುವ ಬದಲು ಮಠಗಳಲ್ಲಿ ನಡೆಯುವ ಪುರಾಣ, ಪ್ರವಚನವನ್ನು ಆಲಿಸಿದರೆ ಮಾತ್ರ ಜೀವನ ಸಾರ್ಥಕತೆಯಾಗುತ್ತದೆ. ದುಶ್ಚಟ ಮುಕ್ತ ಜಮಖಂಡಿಯನ್ನಾಗಿಸುವದಕ್ಕೆ ಮಠದ ಭಕ್ತ ಸಹಾಯ ಬಹಳ ಮುಖ್ಯವಾಗಿದೆ ಎಂದರು.
ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಮಾತನಾಡಿ, ಮಠದ ಪೂಜ್ಯರಿಗೆ, ಸ್ವಾಮೀಜಿಗಳಿಗೆ ವಚನಗಳೆ ಶ್ರೀರಕ್ಷೆಯಾಗಿವೆ, ಮಠದ ಪೀಠ ಅಲಂಕರಿಸುವವರು ತಂದೆ, ತಾಯಿ, ಬಂಧು ಬಾಂಧವರ ಸಂಬಂಧವನ್ನು ಕಡೆದುಕೊಳ್ಳಬೇಕು. ಜವಾಬ್ದಾರಿಯುತ ಸಮಾಜದ ಮಗುವಾಗಿ ಇರಬೇಕು. ನಾಡಿನಾದ್ಯಂತ ಆಧ್ಯಾತ್ಮ, ಬಸವಾದಿ ಶರಣರ ಆಶಯದಂತೆ ನಡೆಯಬೇಕು. ವಚನಗಳ ಅಧ್ಯಯನ ಮಾಡಬೇಕು, ವಚನಗಳ ಅಧ್ಯಯನದಿಂದ ಜ್ಞಾನ ಹೆಚ್ಚುತ್ತದೆ. ಲಿಂಗಪೂಜೆ, ಸಮಾಜ ಸೇವೆ ಎರಡೂ ಮುಖ್ಯವಾಗಿದೆ, ಶ್ರದ್ಧೆಯಿಂದ ಎರಡು ಕಾರ್ಯಗಳನ್ನು ನಿಭಾಯಿಸಬೇಕು ಎಂದರು.
ಲಿಂಗೈಕ್ಯ ಡಾ.ಚನ್ನಬಸವ ಸ್ವಾಮೀಜಿ ಅವರು ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದ್ದರು, 21ನೇ ಶತಮಾನದ ಆಧುನಿಕ ವಚನಕಾರರಾಗಿದ್ದರು, 12ನೇ ಶತಮಾನದ ನಂತರ 21ನೇ ಶತಮಾನದಲ್ಲಿ ದ್ವಿಪತಿ ಛಂದಸ್ಸಿನಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲನೆಯದಾಗಿ ಬಸವ ಪುರಾಣ ಬರೆದ ಹೆಗ್ಗಳಿಕೆ ಪಾತ್ರರಾಗಿದ್ದರು ಎಂದರು.
ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಸಾಹಿತ್ಯ ವಿದ್ವತ್ ಪರಂಪರೆಯನ್ನು ಓಲೆಮಠದ ಶ್ರೀಗಳು ಪ್ರಾರಂಭಿಸಿದ್ದಾರೆ, ಮಠಕ್ಕೂ ಭಕ್ತರಿಗೂ ಅವಿನಾಭಾವ ಸಂಬಂಧ ಇದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಓಲೆಮಠದ ಶ್ರೀಗಳು ಜಮಖಂಡಿ ಜಿಲ್ಲೆಯಾಗಬೇಕು ಎಂದು ಅಭಿಲಾಸೆ ಹೊಂದಿದ್ದರು, ವಿವಿಧ ಹೋರಾಟಗಳಲ್ಲಿಯೂ ಮುಂದೆ ಇರುತಿದ್ದರು, ಜಮಖಂಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.
ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕೊಣ್ಣೂರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು, ನಾಗನೂರ ರುದ್ರಾಕ್ಷಿಮಠದ ಡಾ,ಅಲ್ಲಮಪ್ರಭು ಸ್ವಾಮೀಜಿ, ಡಾ,ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.
ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ,ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜಯಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳದ ಆನಂದ ದೇವರ ಅವರಿಗೆ ರುದ್ರಾಕ್ಷಿ ಕಿರಿಟ, ಚಿನ್ನದ ಗುಂಡಗಡಿಗಿ, ಶೀರೋ ವಸ್ತ್ರ, ತಾಂಡೊಲೆಗಳನ್ನು ಹಸ್ತಾಂತರಿಸುವ ಮೂಲಕ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.
ವೇದಿಕೆಯಲ್ಲಿ ಮರೆಗುದ್ದಿಯ ಡಾ,ನಿರುಪಾದೀಶ್ವರ ಶ್ರೀಗಳು, ಚಿಮ್ಮಡದ ಪ್ರಭು ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರುಮಹಾಂತ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರುಗಳು ಇದ್ದರು. ಸರಸ್ವತಿ ಸಬರದ ವಚನ ಗಾಯನ ಹಾಡಿದರು, ಬಸವರಾಜೇಂದ್ರ ಝುಂಜರವಾಡ ಸ್ವಾಗತಿಸಿ ನಿರೂಪಿಸಿದರು.
ಬೆಳಗ್ಗೆ 5ರಿಂದ 8.30ರವರೆಗೆ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ, ರವಿ ಯಡಹಳ್ಳಿ ನೇತೃತ್ವದಲ್ಲಿ ಬಸವಾದಿ ಶರಣರ ಕ್ರೀಯಾ ಸಮಾದಿ ಆವರಣದಲ್ಲಿ ವಚನ ಪಠಣ ಕಾರ್ಯಕ್ರಮ ಜರುಗಿತು.