ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028ರ ಮುನ್ನ ಭಾರತೀಯ ಬಾಕ್ಸಿಂಗ್‌ಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ: ಮಂಡಾವಿಯಾ
ನವದೆಹಲಿ, ಅ. 30 : ಭಾರತೀಯ ಬಾಕ್ಸಿಂಗ್‌ಗೆ ಬಲವಾದ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತೀಯ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಅಧ್ಯಕ್ಷ ಅಜಯ್ ಸಿಂಗ್ ಅವರ ಮೇಲೆ ಸರ್ಕಾರ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ಪುನರುಚ್ಚರಿಸಿದ್ದಾರೆ.
ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಮತ್ತು ವಿಶ್ವ ಬಾಕ್ಸಿಂಗ್‌ನ ಮಾಜಿ ಅಧ್ಯಕ್ಷ ಬೋರಿಸ್ ವ್ಯಾನ್ ಡೆರ್ ವೋರ್ಸ್ಟ್ ಉಪಸ್ಥಿತರಿದ್ದ ಸಭೆಯಲ್ಲಿ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಬಾಕ್ಸಿಂಗ್ ಅತ್ಯುತ್ತಮ ಸಾಧನೆಗಳನ್ನು ಮಾಡಿದೆ ಎಂದು ಅವರು ಹೇಳಿದರು.
ಸಭೆಯ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬೋರಿಸ್ ವ್ಯಾನ್ ಡೆರ್ ವೋರ್ಸ್ಟ್, ಇದೊಂದು ಸ್ಫೂರ್ತಿದಾಯಕ ಸಭೆಯಾಗಿತ್ತು ಎಂದು ತಿಳಿಸಿದ್ದಾರೆ.
ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಮತ್ತು ಭಾರತೀಯ ಬಾಕ್ಸಿಂಗ್ ಫೆಡರೇಷನ್ ಹಾಗೂ ಅದರ ಕ್ರೀಡಾಪಟುಗಳಿಗೆ ಸಚಿವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ 140 ಕೋಟಿ ಜನರ ಬೆಂಬಲವೂ ಭಾರತೀಯ ಬಾಕ್ಸಿಂಗ್‌ಗೆ ಇದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ವೋರ್ಸ್ಟ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಬಾಕ್ಸಿಂಗ್ ಸಾಧಿಸಿರುವ ಪ್ರಗತಿ ಮತ್ತು ಅಂತಾರಾಷ್ಟ್ರೀಯ ಬಾಕ್ಸಿಂಗ್ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವುದನ್ನು ಸಚಿವರು ಶ್ಲಾಘಿಸಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತ ದಾಖಲಿಸಿರುವ ಐತಿಹಾಸಿಕ ಪದಕ ಸಾಧನೆಗಳು, ದೇಶದ ಕ್ರೀಡಾಪಟುಗಳ ಪ್ರತಿಭೆ, ದೃಢಸಂಕಲ್ಪ ಮತ್ತು ಒಲಿಂಪಿಕ್ ಯಶಸ್ಸು ಸಾಧಿಸುವ ಸಾಮರ್ಥ್ಯದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ.
ಆದರೆ, ಕೇವಲ ಸಾಮರ್ಥ್ಯವೊಂದೇ ಯಶಸ್ಸಿಗೆ ಸಾಕಾಗುವುದಿಲ್ಲ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಾಧಿಸಲು ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ಫೆಡರೇಷನ್‌ಗಳು, ಸರ್ಕಾರ ಮತ್ತು ಇಡೀ ಬಾಕ್ಸಿಂಗ್ ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ವೋರ್ಸ್ಟ್ ಒತ್ತಿಹೇಳಿದ್ದಾರೆ.
ಸಚಿವ ಮಾಂಡವಿಯಾ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, "2028ರಲ್ಲಿ ಭಾರತೀಯ ಬಾಕ್ಸರ್‌ಗಳು ರಿಂಗ್‌ಗೆ ಪ್ರವೇಶಿಸುವಾಗ ಇಡೀ ದೇಶ ಮತ್ತು ಒಗ್ಗಟ್ಟಿನ ಬಾಕ್ಸಿಂಗ್ ಸಮುದಾಯ ತಮ್ಮ ಬೆನ್ನಿಗೆ ದೃಢವಾಗಿ ನಿಂತಿದೆ ಎಂಬ ವಿಶ್ವಾಸ ಅವರಲ್ಲಿರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
ಭಾರತೀಯ ಬಾಕ್ಸಿಂಗ್‌ನ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ವೋರ್ಸ್ಟ್, ದೇಶದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಒಲಿಂಪಿಕ್ ಪದಕಗಳ ಸಾಧನೆಯಾಗಿ ಪರಿವರ್ತಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.