ರಾಷ್ಟ್ರೀಯ

ಅಮಿತ್ ಶಾ ಅವರು INDIA ಮೈತ್ರಿಕೂಟದ ರ‍್ಯಾಲಿಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂಬುದಕ್ಕೆ ಪುರಾವೆ ನೀಡುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು

ಅಮಿತ್ ಶಾ ಅವರು INDIA ಮೈತ್ರಿಕೂಟದ ರ‍್ಯಾಲಿಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂಬುದಕ್ಕೆ ಪುರಾವೆ ನೀಡುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು

ನವದೆಹಲಿ, ಅ. 30 : ನವೆಂಬರ್ 1ರಂದು ನಡೆಯಲಿರುವ INDIA ಮೈತ್ರಿಕೂಟದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಜನರು ದೆಹಲಿಗೆ ಬರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ಆಡಳಿತಾರೂಢ ಬಿಜೆಪಿ ಶುಕ್ರವಾರ ತಳ್ಳಿಹಾಕಿದೆ. ತಮ್ಮ ಆರೋಪಕ್ಕೆ ಪುರಾವೆ ಒದಗಿಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವುದನ್ನು ರಾಹುಲ್ ಗಾಂಧಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

"ಯಾರನ್ನು ಎಲ್ಲಿ ತಡೆಯಲಾಗಿದೆ? ಅದಕ್ಕೆ ಪುರಾವೆ ತೋರಿಸಿ" ಎಂದು ಪಾತ್ರಾ ಪ್ರಶ್ನಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಶುಕ್ರವಾರ ನಡೆಸಲು ಉದ್ದೇಶಿಸಿದ್ದ 'ಸಾರ್ವಜನಿಕ ದೋಷಾರೋಪಣೆ' ಕಾರ್ಯಕ್ರಮವನ್ನು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ವಿಫಲವಾದ ಕಾರಣ INDIA ಮೈತ್ರಿಕೂಟ ಮುಂದೂಡಿದೆ ಎಂದು ಪಾತ್ರಾ ಆರೋಪಿಸಿದರು.

ವಿಪಕ್ಷಗಳ ನಡುವೆ ಒಗ್ಗಟ್ಟಿನ ಕೊರತೆ ಇದೆ. ಸಂಘಟನಾ ಸಾಮರ್ಥ್ಯವೂ ಇಲ್ಲ. ಬಹುಶಃ ಇದೇ ಕಾರಣಕ್ಕೆ ಅವರು ತಮ್ಮ ಅಣಕು ಸಂಸತ್ತನ್ನು ಮುಂದೂಡಬೇಕಾಯಿತು ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಟೀಕಿಸಿದರು.

ಇದಕ್ಕೂ ಮೊದಲು, ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಜನರು ದೆಹಲಿಗೆ ಬರುವುದನ್ನು ತಡೆಯಲು ಅಮಿತ್ ಶಾ ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಸುದ್ದಿ ಓದಿ