ರಾಷ್ಟ್ರೀಯ

ಗುಜರಾತ್‌ನಲ್ಲಿ 14,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; ಪಿಎಂ-ಕಿಸಾನ್‌ನಡಿ ರೈತರಿಗೆ 18,000 ಕೋಟಿ ರೂ. ಬಿಡುಗಡೆ

ಗುಜರಾತ್‌ನಲ್ಲಿ 14,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; ಪಿಎಂ-ಕಿಸಾನ್‌ನಡಿ ರೈತರಿಗೆ 18,000 ಕೋಟಿ ರೂ. ಬಿಡುಗಡೆ

ನವದೆಹಲಿ, ಅ.30 : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗುಜರಾತ್‌ನ ಬನಸ್ಕಾಂಠ ಜಿಲ್ಲೆಯಲ್ಲಿ 14,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನಡಿ ದೇಶದ ಸುಮಾರು 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 18,000 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ನೇರವಾಗಿ ವರ್ಗಾವಣೆ ಮಾಡಿದರು.

ಭಿಲ್ಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕೃಷಿ, ಹೈನುಗಾರಿಕೆ, ಪಶುಸಂಗೋಪನೆ, ರೈಲ್ವೆ, ಹೆದ್ದಾರಿ, ಮೆಟ್ರೋ ಸಂಪರ್ಕ, ನಗರ ಮೂಲಸೌಕರ್ಯ, ಆಹಾರ ಸಂಸ್ಕರಣೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು.

ಪ್ರಮುಖ ಯೋಜನೆಗಳಲ್ಲಿ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್, ಬನಾಸ್ ಡೈರಿಯ ಆಲೂಗಡ್ಡೆ ಸಂಸ್ಕರಣಾ ಘಟಕಗಳ ವಿಸ್ತರಣೆ, ಎರಡು ಜೈವಿಕ ಅನಿಲ ಯೋಜನೆಗಳು, ಹೊಸ ರೈಲು ಸೇವೆಗಳು ಹಾಗೂ ಪ್ರಮುಖ ರಸ್ತೆ ಮತ್ತು ಮೆಟ್ರೋ ಸಂಪರ್ಕ ಯೋಜನೆಗಳಿಗೆ ಶಂಕುಸ್ಥಾಪನೆ ಸೇರಿವೆ.

ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಒತ್ತಿಹೇಳಿದ ಮೋದಿ, 2013-14ಕ್ಕೆ ಹೋಲಿಸಿದರೆ ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಲ್ಲಿ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಕ್ರಮಗಳ ಮೂಲಕ ರೈತರಿಗೆ 50 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ನೆರವು ಹಾಗೂ ಉಳಿತಾಯದ ಪ್ರಯೋಜನ ದೊರೆತಿದೆ ಎಂದು ಅವರು ತಿಳಿಸಿದರು.

ಪಿಎಂ-ಕಿಸಾನ್ ಯೋಜನೆ, ರಸಗೊಬ್ಬರ ಸಬ್ಸಿಡಿ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಬೆಳೆ ವಿಮೆ ಮತ್ತು ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ಗಳನ್ನು ಉಲ್ಲೇಖಿಸಿದ ಅವರು, ಈ ಕ್ರಮಗಳು ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರ ಜತೆಗೆ ಕೃಷಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದರು.

ಪಿಎಂ-ಕಿಸಾನ್ ಯೋಜನೆಯಡಿ ಸಣ್ಣ ರೈತರಿಗೆ ಸುಮಾರು 4.5 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ಅಂತಾರಾಷ್ಟ್ರೀಯ ರಸಗೊಬ್ಬರ ಬೆಲೆಗಳ ಏರಿಳಿತದಿಂದ ರೈತರನ್ನು ರಕ್ಷಿಸಲು ಸುಮಾರು 16 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಕಳೆದ 12 ವರ್ಷಗಳಲ್ಲಿ ಗೋಧಿ ಮತ್ತು ಭತ್ತದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮೂಲಕ 24 ಲಕ್ಷ ಕೋಟಿ ರೂ. ದೊರೆತಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಪರಿಹಾರ ವಿತರಿಸಲಾಗಿದೆ ಎಂದು ಅವರು ಹೇಳಿದರು.

ಪಿಎಂ-ಕುಸುಮ್ ಯೋಜನೆಯಡಿ ಸುಮಾರು 12 ಲಕ್ಷ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಗಳನ್ನು ವಿತರಿಸಲಾಗಿದ್ದು, ಇದರಿಂದ ರೈತರ ಸಾಂಪ್ರದಾಯಿಕ ವಿದ್ಯುತ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.

ದೇಶದ ಒಟ್ಟು ರೈತ ಸಮುದಾಯದಲ್ಲಿ ಶೇ.85ಕ್ಕಿಂತ ಹೆಚ್ಚು ಮಂದಿ ಸಣ್ಣ ರೈತರಾಗಿದ್ದಾರೆ ಎಂದು ಉಲ್ಲೇಖಿಸಿದ ಮೋದಿ, ನೇರ ಆರ್ಥಿಕ ನೆರವು, ಆಧುನಿಕ ತಂತ್ರಜ್ಞಾನ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಮೂಲಕ ಅವರ ಅಗತ್ಯಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ರೈತರಿಗೆ 26 ಕೋಟಿಗೂ ಅಧಿಕ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಸುಮಾರು 3,000 ಹೊಸ ತಳಿಯ ಬೀಜಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ ಅನ್ನು 328.77 ಕೋಟಿ ರೂ. ವೆಚ್ಚದಲ್ಲಿ 127 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಸ್ಥಳೀಯ ಕಂಕ್ರೇಜ್ ತಳಿಗೆ ವಿಶೇಷ ಆದ್ಯತೆ ನೀಡುವುದರೊಂದಿಗೆ ದೇಶೀಯ ದನ ಮತ್ತು ಎಮ್ಮೆ ತಳಿಗಳ ಸಂರಕ್ಷಣೆ, ವೈಜ್ಞಾನಿಕ ಸಂತಾನೋತ್ಪತ್ತಿ ಹಾಗೂ ತಳಿಯ ಗುಣಮಟ್ಟ ಸುಧಾರಿಸುವುದು ಕೇಂದ್ರದ ಉದ್ದೇಶವಾಗಿದೆ.

ದೇಶೀಯ ಜಾನುವಾರುಗಳ ತಳಿಯ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಇನ್‌ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಹಾಗೂ ಭ್ರೂಣ ವರ್ಗಾವಣೆ ಸೇರಿದಂತೆ ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸಲಾಗುವುದು ಎಂದು ಮೋದಿ ಹೇಳಿದರು.

ಗಿರ್, ಸಾಹಿವಾಲ್ ಮತ್ತು ಕಂಕ್ರೇಜ್ ಸೇರಿದಂತೆ ದೇಶೀಯ ಹಸು ತಳಿಗಳು ಹಾಗೂ ಮೆಹ್ಸಾನಾ, ಮುರ್ರಾ ಮತ್ತು ಜಾಫರಾಬಾದಿ ಎಮ್ಮೆ ತಳಿಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುವುದು ಎಂದರು.

ಸುಧಾರಿತ ತಳಿ ಅಭಿವೃದ್ಧಿ ಪದ್ಧತಿ, ಸಕಾಲಿಕ ಲಸಿಕೆ ಮತ್ತು ಉತ್ತಮ ಪಶುವೈದ್ಯಕೀಯ ಸೌಲಭ್ಯಗಳು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದರ ಜತೆಗೆ ಜಾನುವಾರು ಸಾಕಾಣಿಕೆ ಮಾಡುವ ಕುಟುಂಬಗಳ ಆದಾಯವನ್ನು ಹೆಚ್ಚಿಸಬಲ್ಲವು. ವಿಶೇಷವಾಗಿ ಭಾರತದ ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಕಾಲುಬಾಯಿ ರೋಗದ ವಿರುದ್ಧ ದೇಶಾದ್ಯಂತ ಕೈಗೊಂಡ ಲಸಿಕಾ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನಿ, ಜಾನುವಾರುಗಳಿಗೆ ಸುಮಾರು 150 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಎಂಟು ಕೋಟಿಗೂ ಅಧಿಕ ರೈತರ ಜಾನುವಾರುಗಳು ಇದರಿಂದ ಪ್ರಯೋಜನ ಪಡೆದಿವೆ ಎಂದರು.

2013-14ರಲ್ಲಿ ಪ್ರತಿ ಜಾನುವಾರಿನ ಸರಾಸರಿ ದೈನಂದಿನ ಹಾಲಿನ ಉತ್ಪಾದನೆ ಐದು ಲೀಟರ್‌ಗಿಂತ ಕಡಿಮೆ ಇತ್ತು. ಈಗ ಅದು ಸುಮಾರು ಎಂಟು ಲೀಟರ್‌ಗೆ ಏರಿಕೆಯಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದ್ದು, ಉತ್ಪಾದಕತೆಯ ಬೆಳವಣಿಗೆಯಲ್ಲೂ ಮುಂಚೂಣಿಯಲ್ಲಿದೆ ಎಂದು ಮೋದಿ ತಿಳಿಸಿದರು.

ಜಾನುವಾರುಗಳ ಸಗಣಿ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಅನಿಲ, ಜೈವಿಕ ಸಿಎನ್‌ಜಿ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಕರೆ ನೀಡಿದರು. ಇದರಿಂದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಈ ಹಿನ್ನೆಲೆಯಲ್ಲಿ ಥರಾಡ್ ಮತ್ತು ರಾಧನ್‌ಪುರದಲ್ಲಿ ಎರಡು ಜೈವಿಕ ಅನಿಲ ಯೋಜನೆಗಳಿಗೆ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಹಾಲು ಉತ್ಪಾದನೆ, ತ್ಯಾಜ್ಯ ನಿರ್ವಹಣೆ ಮತ್ತು ನವೀಕರಿಸಬಹುದಾದ ಇಂಧನವನ್ನು ಪರಸ್ಪರ ಜೋಡಿಸುವ ಮೂಲಕ ಸಮಗ್ರ ಗ್ರಾಮೀಣ ಆರ್ಥಿಕತೆಯನ್ನು ರೂಪಿಸುವಲ್ಲಿ ಬನಾಸ್ ಡೈರಿಯಂತಹ ಹೈನುಗಾರಿಕೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.

ಬನಾಸ್ ಡೈರಿಯ ಆಲೂಗಡ್ಡೆ ಸಂಸ್ಕರಣಾ ಘಟಕಗಳ ವಿಸ್ತರಣೆಯೂ ಅಭಿವೃದ್ಧಿ ಯೋಜನೆಗಳ ಪ್ರಮುಖ ಭಾಗವಾಗಿದೆ. ಫ್ರೆಂಚ್ ಫ್ರೈಸ್ ತಯಾರಿಕಾ ಘಟಕದ ವಿಸ್ತರಣೆ ಮತ್ತು ಸ್ವಯಂಚಾಲಿತ ಸಂಗ್ರಹಣಾ ವ್ಯವಸ್ಥೆ ಸೇರಿದಂತೆ ನವೀಕರಿಸಿದ ಮೂಲಸೌಕರ್ಯವು ಉತ್ತರ ಗುಜರಾತ್‌ನಲ್ಲಿ ಬೆಳೆಯುವ ಆಲೂಗಡ್ಡೆಯ ಸಂಗ್ರಹಣೆ ಮತ್ತು ಸಂಸ್ಕರಣೆಗೆ ನೆರವಾಗಲಿದೆ.

ಈ ವಿಸ್ತರಣೆಯಿಂದ ಆಲೂಗಡ್ಡೆ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರೆಯಲಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೂ ಅವಕಾಶ ಸಿಗಲಿದೆ ಎಂದು ಮೋದಿ ಹೇಳಿದರು.

ಆಲೂಗಡ್ಡೆ, ಟೊಮೆಟೊ, ಮೆಣಸಿನಕಾಯಿ, ದ್ರಾಕ್ಷಿ, ಬಾಳೆಹಣ್ಣು, ಈರುಳ್ಳಿ, ಕಿತ್ತಳೆ, ದಾಳಿಂಬೆ ಮತ್ತು ಕೋಕೋ ಸೇರಿದಂತೆ 12 ತೋಟಗಾರಿಕಾ ಕ್ಲಸ್ಟರ್‌ಗಳಿಗೆ ಅನುಮೋದನೆ ನೀಡಿರುವುದನ್ನೂ ಅವರು ಉಲ್ಲೇಖಿಸಿದರು. ಹೊಸ ತೋಟಗಳ ಸ್ಥಾಪನೆ ಮತ್ತು ಹಳೆಯ ತೋಟಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ಹಾಗೂ ಸಂಘಟಿತ ಕ್ಲಸ್ಟರ್ ಅಭಿವೃದ್ಧಿಯ ಮೂಲಕ ಬೆಂಬಲ ನೀಡಲಾಗುವುದು. ಉತ್ತರ ಗುಜರಾತ್‌ನಲ್ಲಿ ಗುರುತಿಸಿರುವ ಎರಡು ಕ್ಲಸ್ಟರ್‌ಗಳಿಂದ ಬನಸ್ಕಾಂಠ ಮತ್ತು ಸಬರ್‌ಕಾಂಠ ಜಿಲ್ಲೆಗಳ ಆಲೂಗಡ್ಡೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬನಸ್ಕಾಂಠ ಜಿಲ್ಲೆಯಲ್ಲಿ ಆಗಿದ್ದ ಬದಲಾವಣೆಗಳನ್ನು ಸ್ಮರಿಸಿದ ಮೋದಿ, ನೀರಾವರಿ ಸೌಲಭ್ಯಗಳ ಸುಧಾರಣೆ, ನರ್ಮದಾ ನೀರಿನ ಲಭ್ಯತೆ ಮತ್ತು ಹನಿ ನೀರಾವರಿ ತಂತ್ರಜ್ಞಾನದ ಅಳವಡಿಕೆಯಿಂದ ಜಿಲ್ಲೆಯ ಕೃಷಿ ಚಿತ್ರಣವೇ ಬದಲಾಗಿದೆ ಎಂದು ಹೇಳಿದರು.

ರೈತರು ನೀರು ಮತ್ತು ವಿದ್ಯುತ್ ಉಳಿತಾಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ ಅವರು, ನರ್ಮದಾ ನೀರು ಮತ್ತು ಹನಿ ನೀರಾವರಿಯಂತಹ ಆಧುನಿಕ ತಂತ್ರಜ್ಞಾನಗಳು ಬನಸ್ಕಾಂಠದ ಚಿತ್ರಣ ಹಾಗೂ ಭವಿಷ್ಯವನ್ನೇ ಬದಲಿಸಿವೆ. ಜಿಲ್ಲೆಯ ಆಲೂಗಡ್ಡೆ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿವೆ ಎಂದರು.

ಮೀನುಗಾರಿಕೆ ಮತ್ತು ಜೇನುಸಾಕಣೆಯಂತಹ ಪೂರಕ ಕೃಷಿ ಚಟುವಟಿಕೆಗಳ ಮಹತ್ವವನ್ನೂ ಪ್ರಧಾನಿ ಒತ್ತಿಹೇಳಿದರು. ಭಾರತದ ಸಮುದ್ರಾಹಾರ ರಫ್ತು ಎರಡು ಪಟ್ಟು ಹೆಚ್ಚಾಗಿದ್ದು, ಕಳೆದ 12 ವರ್ಷಗಳಲ್ಲಿ ಜೇನು ಉತ್ಪಾದನೆಯೂ ದ್ವಿಗುಣಗೊಂಡಿದೆ ಎಂದು ಹೇಳಿದರು.

ಭಾರತವು ನೈಸರ್ಗಿಕ ಜೇನಿನ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದ್ದು, ಮಹಿಳಾ ಸ್ವಸಹಾಯ ಗುಂಪುಗಳು ಈ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.

ಕೃಷಿಯನ್ನು ಸಾಂಪ್ರದಾಯಿಕ ಬೆಳೆ ಉತ್ಪಾದನೆಗೆ ಮಾತ್ರ ಸೀಮಿತಗೊಳಿಸದೆ, ತಂತ್ರಜ್ಞಾನ ಆಧಾರಿತ ವೈವಿಧ್ಯಮಯ ಗ್ರಾಮೀಣ ಆರ್ಥಿಕತೆಯಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ಕ್ಷೇತ್ರದಲ್ಲಿ ಅಹಮದಾಬಾದ್ ಮೆಟ್ರೋ 2ಎ ಮತ್ತು 2ಬಿ ಹಂತಗಳ ವಿಸ್ತರಣೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಿಂದ ಗಿಫ್ಟ್ ಸಿಟಿ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ನಗರ ಹಾಗೂ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕ ಸುಧಾರಿಸಲಿದೆ.

ಸುಮಾರು 2,600 ಕೋಟಿ ರೂ. ವೆಚ್ಚದಲ್ಲಿ ಅಹಮದಾಬಾದ್-ಮೆಹ್ಸಾನಾ ಹೆದ್ದಾರಿಯನ್ನು ನಾಲ್ಕು ಪಥಗಳಿಂದ ಎಂಟು ಪಥಗಳಿಗೆ ವಿಸ್ತರಿಸುವ ಯೋಜನೆಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಅಹಮದಾಬಾದ್-ವಾರಾಣಸಿ ಸಾಬರಮತಿ ಎಕ್ಸ್‌ಪ್ರೆಸ್ ಮತ್ತು ಮೆಹ್ಸಾನಾ-ಬೆಚರಾಜಿ-ಸಾಬರಮತಿ ಮೆಮು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಾದೇಶಿಕ ಮತ್ತು ಅಂತರ್‌ನಗರ ರೈಲು ಸಂಪರ್ಕವನ್ನು ಬಲಪಡಿಸಿದರು.

ಸಾಮಾಜಿಕ ವಲಯದಲ್ಲಿ ಗುಜರಾತ್‌ನಲ್ಲಿ 4,000ಕ್ಕೂ ಅಧಿಕ ಆಧುನಿಕ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಯಿತು. ಈ ಕೇಂದ್ರಗಳಿಂದ ಸುಮಾರು ನಾಲ್ಕು ಲಕ್ಷ ಮಕ್ಕಳು ಮತ್ತು ಗರ್ಭಿಣಿಯರಿಗೆ ಆರಂಭಿಕ ಬಾಲ್ಯ ಆರೈಕೆ, ಪೌಷ್ಟಿಕಾಂಶ ಹಾಗೂ ಸಂಬಂಧಿತ ಸೇವೆಗಳು ದೊರೆಯಲಿವೆ.

ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವುದನ್ನು ಸ್ಮರಿಸಿದ ಮೋದಿ, ಸರ್ಕಾರದ ಮುಖ್ಯಸ್ಥನಾಗಿ 25 ವರ್ಷಗಳನ್ನು ಪೂರೈಸಿದ ನಂತರ ಬನಸ್ಕಾಂಠಕ್ಕೆ ಇದು ತಮ್ಮ ಮೊದಲ ಭೇಟಿಯಾಗಿದೆ ಎಂದು ಹೇಳಿದರು.

2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದ ನಂತರ ತಮ್ಮ ಮೊದಲ ಪ್ರಮುಖ ಸಾರ್ವಜನಿಕ ಕಾರ್ಯಕ್ರಮವನ್ನು ಡೀಸಾದಲ್ಲಿ ಆಯೋಜಿಸಲಾಗಿತ್ತು. ಅಂದು ನಡೆದ ಲೋಕ ಕಲ್ಯಾಣ ಮೇಳದಲ್ಲಿ ಸುಮಾರು ಮೂರು ಲಕ್ಷ ಜನರು ಭಾಗವಹಿಸಿದ್ದರು ಎಂದು ಅವರು ನೆನಪಿಸಿಕೊಂಡರು.

ತಮ್ಮ ರಾಜಕೀಯ ಪಯಣಕ್ಕೆ ಗುಜರಾತ್‌ನ ಜನರೇ ಮಾರ್ಗದರ್ಶನ ನೀಡಿದ್ದಾರೆ. ಸಾಮಾನ್ಯ ಜನರ ಅನುಭವ ಮತ್ತು ಸಲಹೆಗಳು ಆಡಳಿತ ಹಾಗೂ ಸಾರ್ವಜನಿಕ ಸೇವೆಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿವೆ ಎಂದರು.

ಇದೇ ವೇಳೆ, ಇರಾನ್ ಮತ್ತು ಕೊಲ್ಲಿ ರಾಷ್ಟ್ರಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಸಗೊಬ್ಬರ ಹಾಗೂ ಅಡುಗೆ ಅನಿಲ ಲಭ್ಯತೆ ಕುರಿತು ವಿರೋಧ ಪಕ್ಷಗಳು ವದಂತಿಗಳನ್ನು ಹರಡಿ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ ಎಂದು ಮೋದಿ ಆರೋಪಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯತ್ಯಯಗಳು ಮತ್ತು ಬೆಲೆ ಏರಿಕೆ ಉಂಟಾದರೂ ದೇಶದಲ್ಲಿ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3,000 ರೂ. ಬೆಲೆ ಇರುವ ಒಂದು ಚೀಲ ಯೂರಿಯಾವನ್ನು ಭಾರತೀಯ ರೈತರಿಗೆ 300 ರೂ.ಗಿಂತ ಕಡಿಮೆ ಬೆಲೆಗೆ ಒದಗಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5,000 ರೂ.ಗಿಂತ ಹೆಚ್ಚಿರುವ ಡಿಎಪಿ ರಸಗೊಬ್ಬರದ ಚೀಲವನ್ನು ದೇಶದಲ್ಲಿ ಸುಮಾರು 1,350 ರೂ.ಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತರ ಹಿತಾಸಕ್ತಿ ಮತ್ತು ಕೃಷಿ ಉತ್ಪಾದನೆಯನ್ನು ಕಾಪಾಡಲು ಸರ್ಕಾರ ಹೆಚ್ಚುವರಿ ಆರ್ಥಿಕ ಹೊರೆಯನ್ನು ಭರಿಸುತ್ತಿದೆ ಎಂದರು.

ಅಂತಾರಾಷ್ಟ್ರೀಯ ಅನಿಶ್ಚಿತತೆಯ ನಡುವೆಯೂ ರಾಷ್ಟ್ರೀಯ ಏಕತೆಯನ್ನು ಕಾಪಾಡುವಂತೆ ಕರೆ ನೀಡಿದ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಹಾಗೂ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಅಕ್ಟೋಬರ್ 31ರಂದು ನಡೆಯುವ 'ಏಕತಾ ಓಟ'ದಲ್ಲಿ ಯುವಕರು ಸೇರಿದಂತೆ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.

ಏಕತಾ ಓಟ ಮತ್ತು ಇತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಏಕತಾ ನಗರದ ವಾರ್ಷಿಕ ಏಕತಾ ಪರ್ವ ಆಚರಣೆಯನ್ನು ಬೆಳಗಿನ ಬದಲಿಗೆ ಸಂಜೆ 5.30ಕ್ಕೆ ಆಯೋಜಿಸಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳ ಬೃಹತ್ ಪಥಸಂಚಲನ ಹಾಗೂ ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದ್ದು, ನವದೆಹಲಿಯ ಗಣರಾಜ್ಯೋತ್ಸವದ ಆಚರಣೆಯ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ದೇಶದ ವಿವಿಧ ಭಾಗಗಳ ಜನರು ಈ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ ಮೋದಿ, 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯ ಬದ್ಧತೆಯನ್ನು ಈ ಸಂದರ್ಭ ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.

ಗುಜರಾತ್‌ನಲ್ಲಿ ಆರಂಭಿಸಲಾದ ಅಭಿವೃದ್ಧಿ ಯೋಜನೆಗಳು ಸಮೃದ್ಧ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ರಾಷ್ಟ್ರೀಯ ಪ್ರಯತ್ನದ ಭಾಗವಾಗಿವೆ. ದೇಶದ ಪರಿವರ್ತನೆಯಲ್ಲಿ ರೈತರು, ಮಹಿಳೆಯರು ಮತ್ತು ಯುವಜನರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿ ಓದಿ