ಬೈಲಹೊಂಗಲ

ಪುನರ್ಮಿಲನ , ಗುರುವಂದನ ಕಾರ್ಯಕ್ರಮ

ಪುನರ್ಮಿಲನ , ಗುರುವಂದನ ಕಾರ್ಯಕ್ರಮ

ತಿಗಡಿ09: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಇವತ್ತಿಗೂ ಇದೆ.ವಿದ್ಯೆ ಕಲಿಸಿದ ಗುರುವನ್ನು ಭಗವಂತನಿಗೂ ಮಿಗಿಲಾದ ಸ್ಥಾನದಲ್ಲಿಟ್ಟು ಪೂಜಿಸಲಾಗುವುದು. ಹೀಗಾಗಿಯೇ ಹರ ಮುನಿದರೂ ಗುರು ಕಾಯುವನು ಎಂಬ ವೇದೋಕ್ತಿ ಇದೆ ಎಂದು ಅರುಣ ಕುಲಕರ್ಣಿ ಯವರು ಇತ್ತೀಚೆಗೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಎಸ್.ಎನ್.ವಿ.ವಿ.ಸಂಸ್ಥೆಯ ಬಿ.ಎಸ್ ಜಕಾತಿ ಪ್ರೌಢಶಾಲೆ 1989-90 ನೇ ಎಸ.ಎಸ.ಎಲ್.ಸಿ ಬ್ಯಾಚ್ ನ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹೇಳಿದರು.

          ಅವರು ಮುಂದುವರೆದು ಮಾತನಾಡಿ ಕಲಿಸಿದ ಗುರುಗಳನ್ನು ಅವರ ಸಂದ್ಯಾಕಾಲದಲ್ಲಿ ಕರೆಸಿ ಗೌರವಿಸಿ ಅವರಿಗೆ ನಮನಗಳನ್ನು ಸಲ್ಲಿಸುವುದು ಗುರುಗಳ ಪಾಲಿಗೆ ಅತ್ಯಂತ ಸಾರ್ಥಕತೆಯ ಕ್ಷಣಗಳು ಎಂದು ಹೇಳಿದರು.

        ಸಂಸ್ಥೆಯ 1989-90 ನೇ ಎಸ್.ಎಸ್.ಎಲ್.ಸಿ ಬ್ಯಾಚ್ ನ ವಿದ್ಯಾರ್ಥಿ ಗಳು ಇಂದು ಗೃಹಿಣಿಯರು, ಪ್ರಗತಿಪರ ರೈತರು, ವ್ಯಾಪಾರಸ್ಥರು, ಸೈನ್ಯ ಹಾಗೂ ರಾಜ್ಯ ಸರ್ಕಾರಿ ಸೇವೆಯಲ್ಲಿದ್ದಾರೆ. 33 ವರ್ಷಗಳ ನಂತರ ಅವರೆಲ್ಲ ಸೇರಿಕೊಂಡು ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 

        ಎಂಬಿ.ಹೆಗ್ಗನ್ನವರ, ಎಂ.ಬಿ ಪರ್ವತಗೌಡ, ಬಿ.ಬಿ ಬಿರಾದಾರ ಪಾಟೀಲ ಹಾಗೂ ಎಸ್.ಬಿ ಕಂಬಾರಗಣವಿ ಇವರುಗಳಿಗೆ ಶಾಲು ಹೊದಿಸಿ ಫಲಪುಷ್ಪ ಮತ್ತು ಫಲಕ ನೀಡಿ ಗೌರವಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಎಲ್ಲ ವಿದ್ಯಾರ್ಥಿಗಳು ಶುಭ ಹಾರೈಸಿದರು..

         ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಹೃದಯ ಭಾಗದಲ್ಲಿರುವ 1999 ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾಗಿರುವ ಇದೇ ಬ್ಯಾಚ್ ನ ಗಂಗಪ್ಪಾ ಮದನ್ನವರ ಅವರ ಪ್ರತಿಮೆಗೆ ಜಯ ಘೋಷದೊಂದಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ತೀರಿಕೊಂಡಿರುವ ಗುರುಗಳಾದ ಶ್ರೀ ನಾವಲಗಟ್ಟಿ, ಜೋಶಿ ಹಾಗೂ ಮದರಿ ಯವರಿಗೆ ಮತ್ತು ಸಹಪಾಠಿಗಳಾಗಿದ್ದ ರಮೇಶ ದಳವಾಯಿ, ನಿಂಗಪ್ಪ ಚಂಡುಗೋಳ,ಸಿದ್ದನಗೌಡ ಪಾಟೀಲ,  ರಾಜಶ್ರೀ ದೊಡಮನಿ ಹಾಗೂ ತಳವಾರ ಇವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.

         ನಂತರ ಗುರುಗಳು ಹಾಗೂ ವಿದ್ಯಾರ್ಥಿಗಳು ಆಗಿನ ತಮ್ಮ ಅನುಭವಗಳನ್ನು ಮೆಲಕು ಹಾಕಿದರು. ಮದ್ಯಾಹ್ನ ಊಟದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ,ಪಂ ಅಧ್ಯಕ್ಷೆಯಾದ ಬಸವಣ್ಣೆವ್ವ ಓ. ಬಾಗಲಕೋಟಿ ಇವರು ವಹಿಸಿದ್ದರು. ಸಾನಿಧ್ಯವನ್ನು ಬಸವಣ್ಣಯ್ಯ ಹಿರೇಮಠ ಇವರು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮದ ಪ್ರಮುಖರಾದ ಪ್ರಮುಖ ಪ್ರಶಾಂತ ಜಕಾತಿ, ಶ್ರೀಕರ ಕುಲಕರ್ಣಿ,ನಿವೃತ್ತ ಸೈನಿಕರ ಅಧ್ಯಕ್ಷ ದೇಶನ್ನವರ, ನಾವಲಗಟ್ಟಿ, ತಿಗಡಿ, ಮರಿಕಟ್ಟಿ ಗ್ರಾಮಗಳ ಶಾಲಾ ಪ್ರ.ಗುರುಗಳು ಹಾಗೂ 1989-90 ನೇ ಬ್ಯಾಚ್ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.


 

ಸುದ್ದಿ ಓದಿ