ಕವಿಗೆ ಕಾವ್ಯ ಕಟ್ಟುವಲ್ಲಿ ಜಾನಪದ ಆಧಾರ: ದೊಡಮನಿ
ಇಂಡಿ: ಕವಿ ಕಟ್ಟುಪಾಡುಗಳಿಗೆ ಒಳಗಾಗುವ ಜೀವಿ ಅಲ್ಲ, ಕಟ್ಟು ಪಾಡು ಮೀರಬೇಕು.ಕಾವ್ಯದ ಸಮತೋಲನಕ್ಕೆ ಜಗತ್ತನ್ನು ಉಳಿಸಿ, ಬೆಳೆಸಿ ಸಂಭಾಳಿಸುವ ಶಕ್ತಿಯಿದೆ. ಹಳತು-ಹೊಸತು ಸೇರಿದಂತೆ ಎಲ್ಲ ವೈರುಧ್ಯಗಳ ನಡುವೆ ಸಮತೋಲನ ಸಾಧಿಸಬೇಕು. ಸಾಂಸ್ಕೃತಿಕ ಸಂವಾದ ನಡೆಸಬೇಕು. ಭಾಷಿಕ ಸೂಕ್ಷ್ಮಗಳು, ಜಾಗತಿಕ ಮತ್ತು ಸುತ್ತಲಿನ ಪರಿಸರದ ತಿಳುವಳಿಕೆ ಅಗತ್ಯವಾಗಿದೆ ಎಂದು ಇಳಕಲ್ ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸದಾಶಿವ ದೊಡಮನಿ ಹೇಳಿದರು.
ಬುಧವಾರ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಯುಗಾದಿ ಹಬ್ಬದ ನಿಮಿತ್ಯ ಏರ್ಪಡಿಸಿದ ಆನ್ ಲೈನ್ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕವಿಗೆ ಕಾವ್ಯ ಕಟ್ಟುವಲ್ಲಿ ಜಾನಪದ ಆಧಾರವಾಗಿದೆ. ಕವಿಗೆ ಪ್ರತಿಭೆ ಇರಬೇಕು, ನಿರಂತರ ಓದುವಿಕೆ ಜೊತೆಗೆ ಸಮಕಾಲೀನ ಸನ್ನಿವೇಶದ ಪ್ರಜ್ಞೆ ಇರಬೇಕು. ಕಾವ್ಯ ನೆನಪಿನ ಮಗಳು, ಬದುಕಿನ ತಾಕಲಾಟಗಳನ್ನು ತೋರ್ಪಡಿಸುವ ಸೂಕ್ಷ್ಮ ಸಂವೇದನೆಯಾಗಿದೆ. ಕವಿಯಾದವನು ಮನುಷ್ಯ ಸಂಬಂಧಗಳನ್ನು ತೆರೆದ ಕಣ್ಣಿನಿಂದ ನೋಡಬೇಕು ಎಂದು ಹೇಳಿದರು.
ಇಂಡಿ ತಾಲೂಕಾ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಹಾಗೂ ಕಾವ್ಯ ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಮಾಡುವುದಲ್ಲದೇ ದೇಶದ ವಿಕಾಸಕ್ಕೂ ಕಾರಣವಾಗುತ್ತದೆ. ಕಾವ್ಯ ರಚನೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಹೇಳಿದರು.
ಇಂಡಿ ಹಿರಿಯ ಸಂಶೋಧಕ ಡಿ.ಎನ್. ಅಕ್ಕಿ ಕವನ ಓದುವ ಮೂಲಕ ಕಾವ್ಯ ಘೋಷ್ಠಿ ಉದ್ಘಾಟಿಸಿದರು.
ಕವಿಗಳಾದ ಸಂತೋಷ ಬಂಡೆ, ಸಂಗನಗೌಡ ಹಚಡದ, ಬಸವರಾಜ ಕಿರಣಗಿ, ವೀರಣ್ಣ ದಸ್ತರೆಡ್ಡಿ, ಸದಾನಂದ ಟೇಳೆ, ದೇವು ಮಾಕೊಂಡ, ಬಿ.ಸಿ. ಭಗವಂತಗೌಡರ, ಸುಜಾತಾ ಬೀಳಗಿ, ಪುಂಡಲೀಕ ಸಣ್ಣಾರ, ಎಂ.ಎಂ. ಮುಲ್ಲಾ, ಡಾ.ರಮೇಶ ಕತ್ತಿ, ಸರೋಜಿನಿ ಮಾವಿನಮರ, ಗಂಗಾಧರ ನಾಗಣಿ, ಸಂಗೀತಾ ಕುಲಕರ್ಣಿ, ಮದರಶಾ ಮಕಾನದಾರ, ದಾನಮ್ಮ ಹಿರೇಪಟ್ಟ, ರಾಚು ಕೊಪ್ಪ ಸೇರಿದಂತೆ 18 ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಯುಗಾದಿ ಕುರಿತು ಕವನ ವಾಚಿಸಿದರು.
ಯುವ ಸಾಹಿತಿಗಳಾದ ಯಶವಂತ ಬಿರಾದಾರ ಸ್ವಾಗತಿಸಿ, ಪರಿಚಯಿಸಿದರು. ಸಾಹಿತಿ ಚಿದಂಬರ ಬಂಡಗರ ನಿರೂಪಿಸಿದರು. ಸಿ.ಆರ್.ಪಿ. ಶ್ರೀಧರ ಹಿಪ್ಪರಗಿ ವಂದಿಸಿದರು.