ನಾಟಕ ಪ್ರದರ್ಶನಕ್ಕೆ ಚಾಲನೆ
ನಾಟಕ ಪ್ರದರ್ಶನಕ್ಕೆ ಚಾಲನೆ
ಧಾರವಾಡ 22: ನಾಟಕಗಳಿಗೆ ಪ್ರೇಕ್ಷಕರೇ ಜೀವಾಳ. ಆಧುನಿಕತೆಯ ಭರಾಟೆಯಲ್ಲಿ ರಂಗಕಲೆ ನಶಿಸಿ ಹೋಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ ಎಂದು ಧಾರವಾಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, 69ನೇ ರಾಜ್ಯೋತ್ಸವ, ಕರ್ನಾಟಕ ನಾಮಕರಣ - 50ರ ಸಂಭ್ರಮ ಅಂಗವಾಗಿ 10 ದಿನಗಳ ನಾಟಕೋತ್ಸವದಲ್ಲಿ ಎರಡನೇ ದಿನ ‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ?’ ನಾಟಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಕ.ವಿ.ವ. ಸಂಘಕ್ಕೆ 134 ವರ್ಷಗಳ ಸುದೀರ್ಘ ಇತಿಹಾಸವಿದೆ. ಕ.ವಿ.ವ. ಸಂಘವು ಕಳೆದ 3 ವರ್ಷಗಳಿಂದ ಅನೇಕೆ ಅಭಿವೃದ್ಧಿ ಕಾರ್ಯಗಳ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ. 10 ದಿನಗಳ ನಾಟಕೋತ್ಸವದ ನಿಮಿತ್ತ ಪ್ರತಿದಿನ ಸಾಧನೆ ಮಾಡಿದ ರಂಗಕಲಾವಿದರನ್ನು ಗೌರವಿಸುವುದು ಶ್ಲಾಘನೀಯ ಕಾರ್ಯವಾಗಿದೆ. ನವ್ಹಂಬರ ಇಡೀ ತಿಂಗಳು ಕಾರ್ಯಕ್ರಮಗಳಿಗೆ ಸರ್ಕಾರ ನೀರೀಕ್ಷಿತ ಅನುದಾನ ನೀಡದಿದ್ದರೂ ಸಂಘವು ತನ್ನ ಆದಾಯದ ಇತಿಮಿತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ರಮದಾಯಕವೂ ಹೌದು. ಧಾರವಾಡದ ಸಾಂಸ್ಕೃತಿಕ ಹಿರಿಮೆಗೆ ಇದು ಸಾಕ್ಷಿ ಎಂದು ಹೇಳಿದರು.
2ನೇ ದಿನದ ನಾಟಕೋತ್ಸವದಲ್ಲಿ ಧಾರವಾಡದ ಲಕ್ಷ್ಮೀ ಬಡಿಗೇರ ಹಾಗೂ ಹುಬ್ಬಳ್ಳಿಯ ಶೋಭಾ ಪವಾರ ರಂಗ ಕಲಾವಿದರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇರ್ವರೂ ರಂಗ ಕಲಾವಿದರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೇದಿಕೆಯಲ್ಲಿ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು. ಸತೀಶ ತುರಮರಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಸಂಯೋಜಿಸಿದರು. ವಿಶ್ವೇಶ್ವರಿ ಬ. ಹಿರೇಮಠ ವಂದಿಸಿದರು. ಕೆ.ಎಚ್. ನಾಯಕ, ಪ್ರಮೀಳಾ ಜಕ್ಕಣ್ಣವರ, ಸವಿತಾ ನೆಲ್ಲಗಣಿ, ಶಿವಾನಂದ ಹೂಗಾರ ಸೇರಿದಂತೆ ಮುಂತಾದವರಿದ್ದರು.
ಧಾರವಾಡದ ಗೊಂಬೆ ಮನೆ ಕಲಾವಿದರಿಂದ ಡಾ. ಪ್ರಕಾಶ ಗರುಡ ನಿರ್ದೇಶನದ ‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ? ಎಂಬ ನಾಟಕ ಪ್ರದರ್ಶನಗೊಂಡಿತು.