ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಇಮಾಮಸಾಬ ಆಯ್ಕೆ
ಕಲಘಟಗಿ ಪಟ್ಟಣ ಪಂಚಾಯತ
ವಾರ್ಡ -3ರ ಸದಸ್ಯ ಸ್ಥಾನಕ್ಕೆ ನ.23 ರಂದು ಉಪ ಚುನಾವಣೆ
ಧಾರವಾಡ (ಕರ್ನಾಟಕ ವಾರ್ತೆ) ಅಕ್ಟೋಬರ್ 30: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಅಥವಾ ಖಾಲಿ ಇರುವ ವಾರ್ಡ ನಂ.03 ರ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯನ್ನು ಜರುಗಿಸಲು ಆಯೋಗವು ಆದೇಶಿಸಿರುತ್ತದೆ.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿಯ ವಾರ್ಡ ನಂ.03 ರ ಸಾಮಾನ್ಯ ಮಿಸಲಾತಿಯ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯನ್ನು ಜರುಗಿಸಲು ನ.4, 2024 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರಪತ್ರ-1 ರಲ್ಲಿ ಚುನಾವಣಾ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ನ.4, 2024 ರಿಂದ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಪಟ್ಟಣ ಪಂಚಾಯತ ಕಲಘಟಗಿ ಕಾರ್ಯಾಲಯದಲ್ಲಿ ನಾಮಪತ್ರಗಳ ಸಲ್ಲಿಕೆಯ ಕಾರ್ಯವು ಪ್ರಾರಂಭವಾಗುತ್ತದೆ.
ನವೆಂಬರ್ 11, 2024 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನ.12 ನಾಮಪತ್ರ ಪರೀಶೀಲನೆ ಕಾರ್ಯ ಜರಗುತ್ತದೆ. ನ.14 ,2024 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ನ.23, 2024 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ಜರುತ್ತದೆ. ಅವಶ್ಯವಿದ್ದಲ್ಲಿ ನ.25 ,2024 ರಂದು ಮರು ಮತದಾನ ನಡೆಸಲಾಗುವದು. ನ.26,2024 ರಂದು ಮತ ಎಣಿಕೆ ಕಾರ್ಯ ಕಲಘಟಗಿ ತಹಶೀದಾರ ಕಚೇರಿಯಲ್ಲಿ ಜರುಗಿಸಿ ಇದೇ ದಿನದಂದು ಚುನಾವಣೆ ಕಾರ್ಯ ಮುಕ್ತಾಯಗೊಳ್ಳುತ್ತದೆ.
ಚುನಾವಣಾ ನೀತಿ ಸಂಹಿತೆಯು ಸದರಿ ಉಪಚುನಾವಣೆ ಜರುಗಲಿರುವ ನಗರ ಸ್ಥಳೀಯ ಸಂಸ್ಥೆಯ ವಾರ್ಡುಗಳ ವ್ಯಾಪ್ತಿಯಲ್ಲಿ ನ.4, 2024 ರಿಂದ ನ.26, 2024ರ ವರೆಗೆ ಜಾರಿಯಲ್ಲಿರುತ್ತದೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಬಾರದೆಂದು ಉಪ ಚುನಾವಣೆ ಜರುಗಲಿರುವ ನಗರ ಸ್ಥಳೀಯ ಸಂಸ್ಥೆಯ ವಾರ್ಡುಗಳ ಎಲ್ಲ ಮತದಾರರಲ್ಲಿ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.
ನ.09, 2024 ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
********
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಇಮಾಮಸಾಬ ಆಯ್ಕೆ
ಧಾರವಾಡ 30: ನವೆಂಬರ್ 1, ಆಚರಿಸುತ್ತಿರುವ 69ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಮತ್ತು ಜನಪದ ಹಾಡುಗಾರ ಇಮಾಮಸಾಬ ಎಮ್. ವಲ್ಲೆಪನವರ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದು ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು ಜಿಲ್ಲೆಯ ಜಾನಪದ ಕಲಾವಿದ ಇಮಾಮಸಾಬ ವಲ್ಲೆಪನವರ ಆಯ್ಕೆಯಾಗಿದ್ದಾರೆ. ಮೂಲತಃ ಜಿಲ್ಲೆಯ ನವಲಗುಂದ ತಾಲೂಕಿನ ನಾಗನೂರ ಗ್ರಾಮದವರಾದ ಇಮಾಮಸಾಬ ಅವರು ಸದ್ಯ ಹುಬ್ಬಳ್ಳಿ ವಾಸಿಗಳಾಗಿದ್ದಾರೆ.
ಜಾನಪದ ಕಲೆ, ಹಾಡು ಮತ್ತು ಜಾನಪದ ಕಲಾತಂಡಗಳನ್ನು ಕಟ್ಟಿಕೊಂಡು ನಾಡಿನಾದ್ಯಂತ ಜಾನಪದ ಕಲೆಯನ್ನು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜಾನಪದ ಕಲೆಯನ್ನು ಪಸರಿಸಿ ಪ್ರಚುರ ಪಡಿಸಿದ್ದಾರೆ. ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ತಜ್ಞರಾಗಿ ವಿಶೇಷ ಉಪನ್ಯಾಸಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯಿಂದ ಪ್ರಶಸ್ತಿ ಪುರಸ್ಕೃತರಾಗಿರುವ ಇಮಾಮಸಾಬ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಜಾನಪದ ತಜ್ಞರು ಅಭಿನಂದಿಸಿದ್ದಾರೆ.
(ಫೋಟೋ ಇದೆ)
**********
ಕರ್ನಾಟಕ ಸಂಭ್ರಮ-50 ಅಭಿಯಾನದ ಸುವರ್ಣ ಮಹೋತ್ಸವ
ಧಾರವಾಡ ಜಿಲ್ಲೆಯ ಏಳು ಜನ ಸಾಧಕರಿಗೆ ಸುರ್ವಣ ಮಹೋತ್ಸವ ಪ್ರಶಸ್ತಿ ಪ್ರಕಟ
ಧಾರವಾಡ 30: ಕರ್ನಾಟಕ ಸಂಭ್ರಮ-50 ಅಭಿಯಾನದ ಸುರ್ವಣ ಮಹೋತ್ಸವ ಸಂಧರ್ಭಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಜನ ಮಹಿಳಾ ಸಾಧಕರು ಮತ್ತು 50 ಜನ ಪುರುಷ ಸಾಧಕರಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿದ ಗೌರವಿಸಲು ಸರ್ಕಾರವು ಸಾಧಕರನ್ನು ಆಯ್ಕೆ ಮಾಡಿ ಘೋಷಿಸಿದೆ.
ಸುರ್ವಣ ಮಹೋತ್ಸವ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ಏಳು ಜನ ಸಾಧಕರು ಆಯ್ಕೆಯಾಗಿದ್ದಾರೆ. ಪುರುಷ ವಿಭಾಗದ ಸಂಕೀರ್ಣ ಕ್ಷೇತ್ರದಲ್ಲಿ ವಿದ್ಯಾರ್ವಧಕ ಸಂಘದ ದ್ವಾರಕನಾಥ ಮತ್ತು ಮಹಿಳಾ ವಿಭಾಗದ ಜಾನಪದ ಕ್ಷೇತ್ರದಲ್ಲಿ ಲಕ್ಷ್ಮೀಬಾಯಿ ಹರಿಜನ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಅಕ್ಕಮಹಾದೇವಿ, ರಂಗಭೂಮಿ ಕ್ಷೇತ್ರದಲ್ಲಿ ಶಾಂತಬಾಯಿ ಜೋಷಿ, ಚಿತ್ರಕಲೆ ಕ್ಷೇತ್ರದಲ್ಲಿ ಡಾ. ರೇಣುಕಾ ಮಾರ್ಕಂಡೆ, ಸಂಗೀತ ಕ್ಷೇತ್ರದಲ್ಲಿ ಲತಾ ಜಹಂಗೀರದಾರ್, ಸಮಾಜ ಸೇವೆ ಕ್ಷೇತ್ರದಲ್ಲಿ ಲೂಸಿ ಸಲ್ದಾನ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಧಾರವಾಡ ಜಿಲ್ಲೆಯಿಂದ ಸುರ್ವಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಏಳು ಜನ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಅಭಿನಂದಿಸಿದ್ದಾರೆ.
************
ಕರ್ನಾಟಕ ರಾಜ್ಯೋತ್ಸವ; ನಾಳೆ ಹಲ್ಮಡಿ ಶಾಸನದ ಪ್ರತಿಕೃತಿ ಅನಾವರಣ
ಧಾರವಾಡ 30: ನವೆಂಬರ್ 1, 2024 ರಂದು 69 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರಿ್ಡಸಲಾಗಿದೆ.
ಕಾರ್ಯಕ್ರಮ ಪೂರ್ವದಲ್ಲಿ ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಅಭಿಯಾನದಡಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದ ಆವರಣದಲ್ಲಿ ಬೆಳಿಗ್ಗೆ 8:20 ಕ್ಕೆ ಕನ್ನಡದ ಮೊದಲ ಶಾಸನವಾದ ಹಲ್ಮಡಿ ಶಾಸನದ ಪ್ರತಿಕೃತಿಯನ್ನು ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಹಿರಿಯ ಅಧಿಕಾರಿ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು. ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*********
ದ್ವೀಚಕ್ರ ವಾಹನಗಳ ಬಹಿರಂಗ ಹರಾಜು
ಧಾರವಾಡ 30: ನವೆಂಬರ್ 6, 2024 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ವಾಹನ ವಿಭಾಗ)ಯ ಆವರಣದಲ್ಲಿ ನಿರುಪಯುಕ್ತ ಪೋಲಿಸ್ ದ್ವೀಚಕ್ರ ವಾಹನಗಳ ಬಹಿರಂಗ ಹರಾಜು ಹಮ್ಮಿಕೊಳ್ಳಲಾಗಿದೆ.
ವಾಹನಗಳನ್ನು ಸ್ಕ್ರ್ಯಾಪ್ ದರದಲ್ಲಿ ಖರೀದಿಸಲು ಆಸಕ್ತಿಯುಳ್ಳವರು ದ್ವೀಚಕ್ರ ವಾಹನಗಳ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಸಂರ್ಕಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******
ದೀಪಾವಳಿ ವಿಥ್ ಮೈ ಭಾರತ :ನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ
ಧಾರವಾಡ 30: ಭಾರತ ಸರಕಾರದ ನೆಹರು ಯುವ ಕೇಂದ್ರ, ಶ್ರೀ ವಾಯುಪುತ್ರ ಸಾಂಸ್ಕೃತಿಕ ಕಲಾ ಕ್ರೀಡಾ ಶಿಕ್ಷಣ, ಗ್ರಾಮ ಅಭಿವೃದ್ಧಿ ಯುವ ಸಂಘ, ರಂಗಜೀವನ ಸಂಘ, ಚಂದ್ರ ಸ್ಪೂರ್ತಿ ಸಾಂಸ್ಕೃತಿಕ ಕಲಾ ಸಂಘ ಹಾಗೂ ಆದರ್ಶ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಇವರ ಸಹಯೋಗದಲ್ಲಿ ನನ್ನ ಭಾರತ ಅಡಿಯಲ್ಲಿ ದೀಪಾವಳಿ ವಿಥ್ ಮೈ ಭಾರತ ಅಂಗವಾಗಿ ಧಾರವಾಡ ನಗರದ ಮಾರ್ಕೆಟ್ಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,.
ನೆಹರು ಯುವ ಕೇಂದ್ರದ ಸಿಬ್ಬಂದಿ ಶಿವಾಜಿ ಎನ್. ಕೆ, ಬಸವರಾಜ ಗುಡ್ಡಪ್ಪನವರ, ಶಶಿಕುಮಾರ, ಪ್ರೇಮಾ ಭಂಜತ್ರಿ, ವಿಜಯಲಕ್ಷ್ಮೀ ಭಂಜತ್ರಿ, ವಿಜಯಕುಮಾರ, ಮಂಜುನಾಥ, ಈರಣ್ಣ ಹಾಗೂ ಮಹೇಶ ಹಾಜರಿದ್ದರು.
(ಫೋಟೋ ಇವೆ)
*******
ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮ
ಧಾರವಾಡ (ಕರ್ನಾಟಕ ವಾರ್ತೆ) ಅಕ್ಟೋಬರ್ 30: ಇಂದು (ಅ.30) ಬೆಳಿಗ್ಗೆ ನವಲಗುಂದ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ 2024-25 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಉಪಯೋಜನೆ (ಎಸ್ಸಿಎಸ್ಪಿ, ಟಿಎಸ್ಪಿ) ಅಡಿ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ್ ಕಬಾಡೆ ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಖರ್ಜೂರ ಪಾನಕ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ ಶಿಬಿರವನ್ನು ಜರುಗಿಸಲಾಯಿತು.
ಧಾರವಾಡ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಎ. ಎಸ್., ಡಾ. ಹೇಮಂತ ಅರಕೇರಿ, ಡಾ. ಅಶ್ವಿನಿ ಅಮರಗೋಳ ಅವರು ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ ಮಾಡಿ ಉಚಿತ ಓಷಧಿಯನ್ನು ವಿತರಿಸಿದರು. ಚನ್ನಬಸವಣ್ಣ ಕೆಲಗೇರಿ ಅವರು ವಿದ್ಯಾರ್ಥಿನಿಯರಿಗೆ ಯೋಗ ತರಬೇತಿಯನ್ನು ನೀಡಿದರು. ಹಾಗೂ ನವರಂಬರ್ ಮತ್ತು ಡಿಸೆಂಬರ್ 2024 ಪ್ರತಿ ದಿನ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಉಚಿತ ಯೋಗಾಭ್ಯಾಸ ಆಯೋಜಿಸಲಾಗಿದೆ.
ಶಾಲೆಯ ಪ್ರಾಚಾರ್ಯ ಆಶೀಪ್ ಅಲಿ ನದಾಫ್, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಫೋಟೋ ಇದೆ)
*******
ಜಿಲ್ಲಾ ಪೊಲೀಸ್ ಇಲಾಖೆ
ಇಂದು ಪ.ಜಾ., ಪ.ಪಂ ಸಮುದಾಯ ಮುಖಂಡರ ಸಭೆ
ಧಾರವಾಡ 30: ಜಿಲ್ಲಾ ಪೊಲೀಸ್ ಇಲಾಖೆಯಿಂದ ನಾಳೆ ಅಕ್ಟೋಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ.ಜಾ., ಪ.ಪಂ ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಸಭೆ ಅಧ್ಯಕ್ಷತೆ ವಹಿಸಲಿದ್ದು, ತಹಶಿಲ್ದಾರರು ಮತ್ತು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು, ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
*****