ಧಾರವಾಡ - ಹುಬ್ಬಳ್ಳಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಸಿಕ ಸಭೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಸಿಕ ಸಭೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಸಿಕ ಸಭೆ 

ಧಾರವಾಡ 04 : ಅಕ್ಟೋಬರ ಮಾಹೆಯಲ್ಲಿ ಸುರಿದ ಅಕಾಲಿಕ ನಿರಂತರ ದಟ್ಟ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯ ಸಮೀಕ್ಷೆಯಲ್ಲಿ ಅನರ್ಹರು ಸೆರೆ​‍್ಡ ಆಗದಂತೆ ಅಧಿಕಾರಿ, ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು ಮತ್ತು ಅರ್ಹ ಯಾವ ಒಬ್ಬ ರೈತರ ಜಮೀನುಗಳು ಬೆಳೆ ಹಾನಿ ಸಮೀಕ್ಷೆಯಿಂದ ಹೊರಗುಳಿಯದಂತೆ ಕಾಳಜಿವಹಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಂದು ಸಂಜೆ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಸಿಕ ಸಭೆ ಜರುಗಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೆಳೆ ಹಾನಿ ಸಮೀಕ್ಷಾ ವರದಿಯನ್ನು ನಾಳೆಯೊಳಗೆ ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಮತ್ತು ಪ್ರಕಟಿತ ಸಮೀಕ್ಷಾ ವರದಿಯ ಪ್ರತಿಯನ್ನು ಆಯಾ ತಾಲೂಕಿನ ತಹಶಿಲ್ದಾರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಗ್ರಾಮ ಪಂಚಾಯತ ಮಟ್ಟದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಡಂಗುರ ಸಾರುವ ಮೂಲಕ ರೈತ ಕುಟುಂಬಗಳಿಗೆ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿರುವ ಕುರಿತು ಮತ್ತು ಬೆಳೆ ಹಾನಿ ಆಗಿರುವ ರೈತರ ಹೆಸರು, ವಿವರ ಇರುವ ಬಗ್ಗೆ ಪರೀಶೀಲಿಸಿ, ಆಕ್ಷೆಪಣೆಗಳಿದ್ದಲ್ಲಿ ಸಲ್ಲಿಸಲು ಮಾಹಿತಿ ನೀಡಬೇಕು. ಗ್ರಾಮ ಪಂಚಾಯತಗಳ ಸೂಚನಾ ಪಲಕದಲ್ಲಿ ಆಯಾ ಗ್ರಾಮಗಳ ಬೆಳೆ ಹಾನಿ ಸಮೀಕ್ಷಾ ವರದಿಯ ಪ್ರತಿಯನ್ನು ಪ್ರಚುರ ಪಡಿಸಬೇಕೆಂದು ಅವರು ಅಧಿಕಾರಿಗಳಿಗೆ ಹೇಳಿದರು.ವರದಿ ಪ್ರಕಟಿಸಿದ 7 ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ:  ಬೆಳೆ ಹಾನಿ ಸಮೀಕ್ಷಾ ವರದಿಯಲ್ಲಿ ರೈತರ ಜಮೀನು, ಬೆಳೆ ವಿವರ ಬಿಟ್ಟು ಹೋಗಿದ್ದಲ್ಲಿ, ವಿವರ ಸರಿ ಇರದಿದ್ದಲ್ಲಿ ಅಥವಾ ಪ್ರಕಟಿತ ವರದಿಯಲ್ಲಿನ ಅಂಶಗಳ ಬಗ್ಗೆ ತಕರಾರುಗಳಿದ್ದಲ್ಲಿ ಸಂಬಂಧಿಸಿದ ರೈತರು ಸಮೀಕ್ಷಾ ವರದಿ ಪ್ರಕಟಿಸಿದ 7 ದಿನದೊಳಗೆ ತಮ್ಮ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ಪರೀಶೀಲಿಸಿ, ಕೃಷಿ ಇಲಾಖೆ ಅಧಿಕಾರಿಗಳು, ತಹಶಿಲ್ದಾರರು ಕ್ರಮವಹಿಸಿ, ಅಂತಿಮ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಅಕ್ಟೋಬರ 1 ರಿಂದ ನವೆಂಬರ 4 ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 111.02 ಮೀ.ಮೀ ಬದಲಿಗೆ 221.09 ಮೀ.ಮೀ ಮಳೆ ಆಗಿದೆ. ಅಕ್ಟೋಬರ ಮಾಹೆಯಲ್ಲಿ ಮಳೆಯಿಂದಾಗಿ ಎರಡು ಮಾನವ ಜೀವ ಹಾನಿ ಆಗಿದ್ದು, ನಿಯಮಾನುಸಾರ ತಲಾ ರೂ. 5 ಲಕ್ಷದಂತೆ ಒಟ್ಟು ರೂ. 10 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಮತ್ತು 6 ದೊಡ್ಡ ಜನುವಾರುಗಳ ಜೀವ ಹಾನಿಯಾಗಿದ್ದು, ರೂ. 2.22 ಲಕ್ಷ ಪರಿಹಾರ ಹಾಗೂ ಮೂರು ಸಣ್ಣ ಜಾನುವಾರುಗಳ ಜೀವ ಹಾನಿ ಆಗಿದ್ದು, ರೂ. 12 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ಅವರು ಹೇಳಿದರು.  


ನಿರಂತರ ಮಳೆಯಿಂದಾಗಿ ಅಕ್ಟೋಬರ ತಿಂಗಳಿನಲ್ಲಿ ವಿವಿಧ ತಾಲೂಕುಗಳು ಸೇರಿದಂತೆ ಮೂರು ಮನೆಗಳು ಪೂರ್ಣ ಹಾನಿಯಾಗಿವೆ. ಮತ್ತು 482 ಮನೆಗಳು ಭಾಗಶಃ ಹಾನಿಯಾಗಿವೆ. ಈ ಪೈಕಿ 453 ಮನೆಗಳಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಮನೆಗಳಿಗೆ ನೀರು ನುಗ್ಗಿರುವ 264 ಪ್ರಕರಣಗಳಿಗೆ ರೂ. 12.18 ಲಕ್ಷ ಪರಿಹಾರವನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್‌.ಮುಗನೂರಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್‌.ಎಚ್‌. ಕುಕನೂರ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಇಓ ಗಳು, ಶಾಲಾ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ ರಾಜ್ ಇಂಜೀನೀಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  

ಜಿಲ್ಲಾ ಪಂಚಾಯತಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಹುದ್ದಗಳಿಗೆ ಅರ್ಜಿ ಆಹ್ವಾನ  

ಧಾರವಾಡ 04 : ಧಾರವಾಡ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಪಂಚಾಯತಗಳ ಗ್ರಂಥಾಲಯಗಳಲ್ಲಿ ಖಾಲಿ ಇರುವ 32 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 5, 2024 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 16,382.52 ಗೌರವ ಸಂಭಾವನೆ ನೀಡಲಾಗುತ್ತದೆ.  

ಗ್ರಾಮ ಪಂಚಾಯತವಾರು ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಮೀಸಲಾತಿ ವಿವರ ಹಾಗೂ ನಿಬಂಧನೆಗಳನ್ನು ತಿಳಿದುಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಫೋರ್ಟಲ್  ಗೆ ಅಥವಾ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ