ಅಥಣಿ

ರೋಗಿಗಳಿಗೆ, ಎಚ್‌ಐವಿ ಪೀಡಿತ ಮಕ್ಕಳಿಗೆ ಹಣ್ಣು ಹಂಪಲ ವಿತರಣೆ

ರೋಗಿಗಳಿಗೆ, ಎಚ್‌ಐವಿ ಪೀಡಿತ ಮಕ್ಕಳಿಗೆ ಹಣ್ಣು ಹಂಪಲ ವಿತರಣೆ

ವೆಂಕಟೇಶ ದೇಶಪಾಂಡೆ 

ಅಥಣಿ 02: ಮಹಾತ್ಮಾ ಗಾಂಧಿಜಿ, ಲಾಲಬಹಾದ್ದೂರ ಶಾಸ್ತ್ರಿಜಿಯವರ ಜಯಂತಿ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಹುಲ ಸತೀಶ ಜಾರಕಿಹೊಳಿ ಇವರ ಜನ್ಮ ದಿನದ ಅಂಗವಾಗಿ ಅಥಣಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಧುರೀಣ ಸುನೀಲ ಸಂಕ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಎಚ್‌ಐವಿ ಪೀಡಿತ ಮಕ್ಕಳಿಗೆ ಹಾಗೂ ಸ್ನೇಹ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಹಣ್ಣು ಹಂಪಲ ವಿತರಿಸಲಾಯಿತು.  

    ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ ತಮ್ಮ ಕಾಯಕ ನಿಷ್ಠೆ, ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸುವ ತಮ್ಮ ಅವಿರತ ಅಹಿಂಸಾತ್ಮಕ ಹೋರಾಟದಿಂದಲೇ ಇಡೀ ವಿಶ್ವದ ಗಮನ ಸೆಳೆದವರು ಮಹಾತ್ಮಾ ಗಾಂಧಿಜಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ನಮ್ಮ ದೇಶದ ಎರಡನೇ ಪ್ರಧಾನಿ ಲಾಲ ಬಹಾದ್ದೂರ ಶಾಸ್ತ್ರಿ ತಮ್ಮ ಸರಳ ಜೀವನಕ್ಕೆ ಹೆಸರು ವಾಸಿಯಾಗಿದ್ದರು. ತಮ್ಮ ಆಡಳಿದ ಕೇವಲ 17 ತಿಂಗಳ ಅವಧಿಯಲ್ಲಿ ಭಾರತವನ್ನು ಎತ್ತರಕ್ಕೇರಿಸಿದ ಕೀರ್ತಿ ಶಾಸ್ತ್ರಿಯವರಿಗೆ ಸಲ್ಲುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಸದ್ದಿಲ್ಲದೆ ಸಂಘಟನೆ ಮಾಡುತ್ತಿರುವ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸುಪುತ್ರ ಯುವ ಮುಖಂಡ ರಾಹುಲ ಜಾರಕಿಹೊಳಿಯವರೂ ಕೂಡ ಪಕ್ಷ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಈ ವಿಶೇಷ ದಿನವನ್ನು ಅಥಣಿ ಕಾಂಗ್ರೆಸ್ ಘಟಕ ವಿಶೇಷ ರೀತಿಯಲ್ಲಿ ಆಚರಿಸಿದೆ ಎಂದರು.  

    ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಸುನೀಲ ಸಂಕ, ಕಾಂಗ್ರೆಸ್ ಧುರೀಣರಾದ ರಮೇಶ ಸಿಂದಗಿ, ಸಿದ್ಧಾರ್ಥ ಸಿಂಗೆ, ಎಚ್‌.ಐ.ವಿ ಮಕ್ಕಳ ಪೋಷಕ ನಿಂಜಪ್ಪಾ ಹಿರೇಮನಿ ಮಾತನಾಡಿದರು. ಶ್ರೀಕಾಂತ ಪೂಜಾರಿ, ರಾಜು ಮದಭಾವಿ, ಅನೀಲ ಸುಣಧೋಳಿ, ಶಿವು ಗುಡ್ಡಾಪೂರ, ಸಂಜೀವ ಕಾಂಬಳೆ, ರೇಖಾ ಪಾಟೀಲ, ಸುನೀತಾ ಐಹೊಳಿ, ರೇಖಾ ಕಾಂಬಳೆ, ಮಹಾದೇವಿ ಹೋಳಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ