ಧರ್ಮಸ್ಥಳ ಯೋಜನೆ ಜನರ ಸಮಗ್ರ ಅಭಿವೃದ್ಧಿಗಾಗಿ ರೂಪಿತ: ಪಾಟೀಲ
ಇಂಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರಕಾರ ಮಾಡದೇ ಇರುವ ಕಾರ್ಯವನ್ನೂ ಮಾಡುತ್ತಿದೆ. ಧರ್ಮಸ್ಥಳ ಯೋಜನೆ ಜನರ ಸಮಗ್ರ ಅಭಿವೃದ್ಧಿಗಾಗಿ ರೂಪಿತವಾಗಿವೆ. ಸಂಸ್ಥೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಈ ಸಂಸ್ಥೆಯ ಯೋಜನೆಗಳು ಸರ್ವರಿಗೂ ಪ್ರೇರಣೆಯಾಗಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ ಜಿ.ಆರ್.ಜಿ ಕಲಾ, ವೈ.ಎ.ಪಿ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ, ಸ್ವ ಸಹಾಯ ಸಂಘಗಳ ಒಕ್ಕೂಟ ಇಂಡಿ ತಾಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೋಶ್ರೀ ಡಾ.ಹೇಮಾವತಿ ಹೆಗ್ಗಡೆಯವರ ಕೃಪಾ ಶಿವಾದದೊಂದಿಗೆ ಜರುಗಿದ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿಯ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ವೀರೇಂದ್ರ ಹೆಗಡೆಯವರು ಬಡ ಜನರ ಒಳಿತಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅವರಿಗೆ ಅನುವು ಮಾಡಿಕೊಟ್ಟಿದ್ದಾರೆ. ಮಹಿಳಾ ಗುಂಪುಗಳಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರಿಗೆ ಮುಖ್ಯವಾಹಿನಿಗೆ ತರುವ ಕಾರ್ಯವಾಗುತ್ತಿದೆ ಎಂದರು.
ಇಂಡಿ ತಾಲೂಕು ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ ಪೂಜಾ ಸಮಿತಿ ಪ್ರಗತಿಬಂಧು ಪ್ರಾದೇಶಿಕ ನಿರ್ದೇಶಕ, ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲಬುರಗಿಯ ಜಯಂತ ಪೂಜಾರಿ ಮಾತನಾಡಿ 3000 ಸ್ವ ಸಹಾಯ ಗುಂಪುಗಳಿದ್ದು ಕುಟುಂಬದ ಅರ್ಥಿಕ ಸಬಲೀಕರಣ ಜೊತೆಗೆ ಸಮುದಾಯಕ್ಕೆ ಬೇಕಾಗುವ ಕೆರೆ ಹೂಳು ತೆಗೆಯುವ ಕಾರ್ಯ, ಮಾಶಾಸನ ಸೇರಿದಂತೆ ಹಲವಾರು ಪ್ರಗತಿಪರ ಕಾರ್ಯಕ್ರಮ ಹಮ್ಮಿಕೊಂಡು ಪ್ರಗತಿ ಬಂಧು ಒಕ್ಕೂಟ ಸಹಕಾರ ನೀಡುತ್ತಿದೆ ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಆಶೀರ್ವಚನ ನೀಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಂಸ್ಥೆಯು ಗ್ರಾಮೀಣ ಜನರ ಅರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯ ಮಾಡುತ್ತಿದೆ. ಪೂಜ್ಯರ ಆಶೀರ್ವಾದ, ಯೋಜನೆಯ ಸಹಕಾರ ತಾಲೂಕಿನ ಜನರ ಮೇಲೆ ನಿರಂತರವಾಗಿರಲಿ ಧರ್ಮಸ್ಥಳ ಸಂಸ್ಥೆಯ ಎಲ್ಲ ಕಾರ್ಯಗಳಿಗೆ ನಿರಂತರ ಸಹಕಾರ ನೀಡಬೇಕಾಗಿದೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಯಮುನಾ ಅಕ್ಕಾ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರೇಮಾ ಪಾಟೀಲ, ಯೋಜನಾಧಿಕಾರಿ ಪಿ.ರಾಜು ಮಾತನಾಡಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಪಿಎಸ್ಐ ಎಸ್.ಬಿ.ಗೊಳಸಂಗಿ, ಶಾಂತೇಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಡಾ. ಸವಿತಾ, ಸತೀಶ ಕುಂಬಾರ, ಯಲ್ಲಪ್ಪ ಹದರಿ ಮತ್ತಿತರಿದ್ದರು.
ಸಾವಿರಾರು ಮಹಿಳೆಯರು ಜೋಡಿಯಾಗಿ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು.