ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆಯಿಂದ ವಿಳಂಬ: ಆಕ್ರೋಶ
ಲೋಕದರ್ಶನ ವರದಿ
ಶಿಗ್ಗಾವಿ: ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆಯಿಂದ ವಿಳಂಬ ಖಂಡಿಸಿ ಆಕ್ರೋಶಗೊಂಡ ರೈತರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಟ್ಟ ಘಟನೆ ಪಟ್ಟಣದ ಬೀಜ ವಿತರಣಾ ಕೇಂದ್ರದ ಎದುರು ಶುಕ್ರವಾರ ಜರುಗಿದೆ.
ಸರಕಾರ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಮುಂಗಾರು ಬರುವ ಮುನ್ನವೆ ಆಯಾ ಕೃಷಿ ಕೇಂದ್ರಗಳಿಗೆ ವಿತರಣೆ ಮಾಡಿತ್ತು, ಅಧಿಕಾರಿಗಳು ಅವುಗಳನ್ನು ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಮುನ್ನ ವಿತರಣೆಮಾಡಬೇಕಿತ್ತು, ತಾಲೂಕಿನಾದ್ಯಂತ ಮುಂಗಾರು ಮಳೆ ಚೆನ್ನಾಗಿ ಆಗಿದ್ದು ಎಲ್ಲಾ ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಬೇಕಾಗಿದ್ದರಿಂದ ಅವುಗಳಿಗಾಗಿ ಮುಗಿ ಬಿದ್ದಿದ್ದಾರೆ, ಸರಕಾರದ ಹೊಸ ಕ್ಯೂಆರ್ ಕೋಡ್ ಮೂಲಕ ಬೀಜಗಳನ್ನು ವಿತರಣೆ ಮಾಡುತ್ತಿದ್ದು ವಿತರಣೆಯಲ್ಲಿ ಮತ್ತಷ್ಟು ತೊಂದರೆ ಆಗುತ್ತಿದೆ. ರೈತರು ಬೆಳಗಿನಿಂದ ಉಪವಾಸ ನಿಂತಿರುವುದರಿಂದ ಆಕ್ರೋಷಗೊಂಡಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಶೀಘ್ರವಾಗಿ ಬೀಜಗಳನ್ನು ರೈತರಿಗೆ ತೊಂದರೆ ಆಗದಂತೆ ವಿತರಿಸಬೇಕು ಎಂದು ರೈತ ಸಂಘಟನೆಯ ಮುಖಂಡರುಗಳಾದ ಮುತ್ತಣ್ಣ ಗುಡಿಗೇರಿ ಮತ್ತು ಶಂಕರಗೌಡ ಪಾಟೀಲ ವತ್ತಾಯಿಸಿದರು.
ಶಿಗ್ಗಾವಿ ಕೃಷಿ ಕೇಂದ್ರಕ್ಕೆ ಡಿವಾಯ್ಎಸ್ಪಿ ಮಂಜುನಾಥ, ಪಿಎಸ್ಐ ಸಂಪತ್ ಆನೇಕಿವಿ, ಹುಲಗೂರು ಪಿ.ಎಸ್.ಐ ಯಲ್ಲಪ್ಪಾ ಸೇರಿದಂತೆ ಅನೇಕ ಸಿಬ್ಬಂದಿಗಳು ಆಗಮಿಸಿ ಬ್ಯಾರಿಕೇಡಗಳನ್ನು ಅಳವಡಿಸಿ ಆಕ್ರೋಶಗೊಂಡ ರೈತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ರೈತರು ಪೋಲಿಸ್ ಇಲಾಖೆಯ ಸಿಬ್ಬಂಧಿಗಳೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ಜರುಗಿತು