ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಭಂಡಾರ ಲೇಸು: ಮಾಳಪ್ಪ ಕಟಿಗೇರ
ರಾಣೇಬೆನ್ನೂರು 04: ತಿಮ್ಮಪ್ಪನ ವರ ಪ್ರಸಾದದಿಂದ ಹಾಲು ಮತದ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳಿಗೆ ತಿಮ್ಮಪ್ಪನ ವರ ಪ್ರಸಾದದಿಂದ ಜನಿಸಿದ ತಿಮ್ಮಪ್ಪನು ಅರಸ ಮನೆತನದಲ್ಲಿ ಹುಟ್ಟಿ . ಸಕಲ ವಿದ್ಯಾ ಪಾರಂಗತನಾದ ಈತನು ಬೀರಪ್ಪ ನಾಯಕನ ಉತ್ತರಾಧಿಕಾರಿಯಾಗಿ ತಿಮ್ಮಪ್ಪ ನಾಯಕನಾದನು. ಸಿಕ್ಕ ಹೊನ್ನರಾಶಿಯನ್ನು ದಾನ ಮಾಡಿ ಕನಕನಾದನು. ಆರಾಧ್ಯ ಧೈವ ಶ್ರೀ ಕೃಷ್ಣನ ಪರಮ ಭಕ್ತನಾಗಿ ಕನಕದಾಸನಾದನು. ಆ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ ದಾರ್ಶನಿಕನಾಗಿ ಸಮಾಜ ಸುಧಾರಕನಾದನು. ಎಂದು ಎಂ ವೈ ದೇಸೂರು ಅವರು ತಮ್ಮ ಉಪನ್ಯಾಸ ಭಾಷಣದಲ್ಲಿ ನುಡಿದರು.
ಸರಕಾರಿ ಪ್ರೌಢಶಾಲೆ ಹನುಮಾಪುರದಲ್ಲಿ ಹಮ್ಮಿಕೊಂಡಿದ್ದ ಸಂತ ಕನಕದಾಸರ 536ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಕನಕದಾಸರ ಜೀವನ ಮತ್ತು ಸಾಧನೆಯ ಮಹತ್ವವನ್ನು ತಿಳಿಸಿದರು.ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಶಿಕ್ಷಣ ಪ್ರೇಮಿ ಗೋಪಾಲ ಅಂತರವಳ್ಳಿ ಮಾತನಾಡಿ ಜಾತಿ ವ್ಯವಸ್ತೆಯನ್ನು. ಸಾಮಾಜಿಕ ತಾರತಮ್ಯ ಹಾಗೂ ಅಂಧಾನುಕರಣೆಯನ್ನು ನಿರ್ಮೂಲನೆ ಮಾಡುವುದು ಮತ್ತು ಭಕ್ತಿಯಲ್ಲಿ ಮೋಕ್ಷ ಸಾಧಿಸುವುದೇ ಕನಕದಾಸರ ಜೀವನದ ಗುರಿಯಾಗಿತ್ತು. ಭಕ್ತಿಯ ಮುಂದೆ ಉಳಿದೆಲ್ಲವೂ ಶಕ್ತಿಹೀನವಾಗುತ್ತದೆ. ಸರ್ವಾಂತರ್ಯಾಮಿಯಾದ ಭಗವಂತನಲ್ಲಿ ನಂಬಿಕೆ ಇಟ್ಟು ಜೀವನದ ಉನ್ನತ ಸಾಧನೆಗೆ ಪಣ ತೊಡಬೇಕು ಎಂದರು.ಮುಖ್ಯ ಗುರುಗಳಾದ ಸಿ ಎಸ್ ಭಗವಂತಗೌಡ್ರ ಉಪಸ್ಥಿತಿಯ ಮಾತನಾಡಿ ಸಮ ಸಮಾಜದ ಉದ್ದಾರಕ್ಕಾಗಿ ಜನಿಸಿದ್ದ ಶರಣ ಬಸವಣ್ಣನವರ ಉತ್ತರಾಧಿಕಾರಿಯಾಗಿ ಹುಟ್ಟಿ ಬಂದ ದಾರ್ಶನಿಕ ಹಾಗೂ ದಾಸಶ್ರೇಷ್ಠ ಕನಕದಾಸರು ಸಕಲಕಲಾ ವಿದ್ಯಾ ಪಾರಂಗತರಾಗಿ. ದಾನಶೂರರಾಗಿ. ಮಾನವತಾವಾದಿಯಾಗಿ ಜನರಲ್ಲಿ ಜನಪರ ಸಹ ಜೀವನದ ಜೀವಪರ ಚಿಂತನೆಯನ್ನು ಮೂಡಿಸುವ ಚಿಂತಕರಾಗಿ ಸಮಾಜವನ್ನು ಉದ್ದಸಿದ್ದಾರೆ. ಅಂತವರ ಆದರ್ಶಗಳನ್ನು ಅನುಸರಿಸಿ ನಾವುಗಳೆಲ್ಲಾ ಮಠದೊಳಗಣ ಬೆಕ್ಕಿನ ಭಕ್ತಿಯನ್ನು ಹೊಂದದೆ. ಮನಪೂರ್ವಕ ಶ್ರದ್ದಾಭಕ್ತಿಯಿಂದ. ಅಚಲವಾದ ನಂಬಿಕೆಯಿಂದ. ನಿರಂತರ ಪರಿಶ್ರಮದಿಂದ ಹಾಗೂ ಗುರಿ ಸಾಧನೆಯ ಛಲದಿಂದ ಜ್ಞಾನಾರ್ಜನೆಯಲ್ಲಿ ತೊಡಗಬೇಕಿದೆ. ಹೇಳುವ ಮೊದಲು ಇತರರು ಹೇಳುವುದನ್ನು ಕೇಳಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರಿಂದಲೂ ಕಲಿಯುವ ಅಗತ್ಯವಿದೆ. ಸಾಧಕರ. ಚಿಂತಕರ. ದಾಸರ. ಶರಣರ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ ಎಂದರು.ಉಪಸ್ಥಿತರಿದ್ದ ಹೊನ್ನಪ್ಪ ಮಾಳಪ್ಪನವರು ಮಾತನಾಡಿ ಮಾನವ ಮನದ ತಾಮಸಗಳನ್ನು ಬದಿಗೊತ್ತಿ ಸಮಾಜದ ಉದ್ದಾರಕ್ಕೆ ಮುಂದಾದಾಗ ಕನಕದಾಸರಂತೆ ಅಮರತ್ವವನ್ನು ಪಡೆಯಲು ಸಾಧ್ಯ ಎಂದರು. ಮಲ್ಲಪ್ಪ ಕಟಿಗೇರ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಮಾತನಾಡಿ ಮರುಳು ಮಾಡುವುದಕ್ಕಿಂತ ಮಾಡಿ ತೋರಿಸುವವರು ಮಾತ್ರ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುತ್ತಾರೆ. ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಭಂಡಾರ ಲೇಸು ಎಂಬಂತೆ ಕನಕದಾಸರು ಸಾಮಾಜಿಕ ಸುಧಾರಣೆಯನ್ನು ಮಾಡಿ ತೋರಿಸಿದರು. ಆಡಿಯೂ ತೋರಿಸಿದರು ಎಂಬ ಮಾರ್ಮಿಕ ಮಾತುಗಳನ್ನಾಡಿದರು.ಸಮಾರಂಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಲ್ತೇಶ ಕಂಬಳಿ. ಹೊನ್ನಪ್ಪ ಮಾದರ. ಮಾರುತಿ ಮಾದರ. ಪಕ್ಕೀರಗೌಡ ಗುಡಿಸಲಕೊಪ್ಪ. ಬಸವರಾಜ ಹಿಂಡಸಗೆರೆ. ಪರಶುರಾಮ ಗುಡಿಸಲಕೊಪ್ಪ. ರವಿ ನಾಡರ. ನಿಂಗಪ್ಪ ಅಂತರವಳ್ಳಿ ಹಾಗೂ ಶಿವಾನಂದ ಕೋಣನವರ ಭಾಗವಹಿಸಿದ್ದರು. ಕಾರ್ಯಕ್ರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿ ಶೋಭೆ ತಂದರು.ಕುಮಾರಿ ಸರಸ್ವತಿ ಡೊಳ್ಳಿನ ಪ್ರಾರ್ಥಿಸಿದರು. ಜಗದೀಶ್ ತೋಟಗೇರ ನಿರೂಪಿಸಿದರೆ ಪುಷ್ಪಾ ಅವರು ವಂದನಾರ್ಪಣೆ ಮಾಡಿದರು