ಕಾಗವಾಡ

ಆಚಾರ್ಯ ದೇವಸೇನ ಮುನಿಮಹಾರಾಜರ ಪ್ರಥಮ ಪುಣ್ಯತಿಥಿ ಆಚರಣೆ

ಆಚಾರ್ಯ ದೇವಸೇನ ಮುನಿಮಹಾರಾಜರ ಪ್ರಥಮ ಪುಣ್ಯತಿಥಿ ಆಚರಣೆ

ಶೇಡಬಾಳ 14: ಅಹಿಂಸಾ ತತ್ವವನ್ನು ಜಗತ್ತಿಗೆ ಸಾರಿದ ಜೈನ ಮುನಿಗಳಾದ ಆಚಾರ್ಯ ದೇವಸೇನ ಮುನಿ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಿದಾಗ ಮಾತ್ರ ಅವರ ಪ್ರಥಮ ಪುಣ್ಯತಿಥಿ ಕಾರ್ಯಕ್ರಮಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದು ಕಾಗವಾಡ ಯುವ ಮುಖಂಡ ಶ್ರೀನಿವಾಸ ಶ್ರೀಮಂತ ಪಾಟೀಲ ಹೇಳಿದರು.

ಅವರು ಮಂಗಳವಾರ ದಿ. 13ರಂದು ಶೇಡಬಾಳ ಪಟ್ಟಣದ ಶಾಂತಿಸಾಗರ ಆಶ್ರಮದಲ್ಲಿ ಜರುಗಿದ ಆಚಾರ್ಯ ದೇವಸೇನ ಮುನಿಮಹಾರಾಜರ ಪ್ರಥಮ ಪುಣ್ಯತಿಥಿ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. 

24 ತೀರ್ಥಂಕರರು ಜೈನ ಮುನಿಗಳು, ಅಹಿಂಸಾ ತತ್ವದ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸತ್ಯ, ಅಹಿಂಸೆ, ತ್ಯಾಗದ ಮಹತ್ವವನ್ನು ಅವರಿಗೆ ಕಲಿಸಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಂತೆ ಕರೆ ನೀಡಿದರು. ಜೈನ ಮುನಿಗಳಾದ ದೇವಸೇನ ಮುನಿಮಹಾರಾಜರು ತಮ್ಮ ಮುನಿ ಜೀವನದೂದ್ದಕ್ಕೂ ಸತ್ಯ, ಅಹಿಂಸೆ, ಅಪರಿಗ್ರಹ ಪಾಲನೆ ಮಾಡುತ್ತಾ ಧರ್ಮ ಪ್ರಚಾರ ಮಾಡುತ್ತಾ ತಮ್ಮ ಆತ್ಮ ಕಲ್ಯಾಣದ ಜತೆಗೆ ಧರ್ಮ ಪ್ರಭಾವನೇ ಮಾಡಿ ಸ್ವರ್ಗವಾಸಿಗಳಾಗಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಕುಮಾರ ಮಾಲಗಾಂವೆ, ದೇವಸೇನ ಮಹಾರಾಜರ ಜೀವನ ಚರಿತ್ರೆ ಕುರಿತು ವಿವರವಾಗಿ ಮಾತನಾಡಿದರು. 

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಾಲಬ್ರಹ್ಮಚಾರಿ ಭೈಯಾಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂಗವಾಗಿ ಮುಂಜಾನೆ 7 ಗಂಟೆಗೆ ಧ್ವಜಾರೋಹಣ, ಆದಿನಾಥ ಭಗವಂತರಿಗೆ ಪೂಜಾಭಿಷೇಕ, 10 ಗಂಟೆಗೆ ಆಚಾರ್ಯ ಪರಿಮೇಷ್ಠಿ ವಿಧಾನ, ಮಧ್ಯಾಹ್ನ 2 ಗಂಟೆಗೆ ಗುರುವಂದನಾ ಕಾರ್ಯಕ್ರಮಗಳು ಜರುಗಿದವು. ಸಾಯಂಕಾಲ 6 ಗಂಟೆಗೆ ದೇವಸೇನ ಮುನಿಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗಿತು. 

ಆಶ್ರಮದ ಸಂಚಾಲಕ ರಾಜು ಕೇಶವ ನಾಂದ್ರೆ, ಕುಮಾರ ಮಾಲಗಾಂವೆ, ಜೆ.ಎನ್.ನಾಂದಣಿ, ಸಚೀನ ಪಾಟೀಲ, ಭರತೇಶ ನರಸಗೌಡರ, ಭರತೇಶ ನಾಂದ್ರೆ, ಅಜೀತ ನರಸಗೌಡರ, ಪ್ರಕಾಶ ಚೌಗಲಾ, ಸುದರ್ಶನ ನರಸಗೌಡರ, ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ಅರುಣ ಯಂದಗೌಡರ, ರಾಜು ಕುಸನಾಳೆ ಸೇರಿದಂತೆ ನೂರಾರು ಶ್ರಾವಕ ಶ್ರಾವಕಿಯರು ಇದ್ದರು 

ಸುದ್ದಿ ಓದಿ