ಗುಳೇಗುಡ್ಡ

ಸಾಬಣ್ಣನ ಮನೆ ಮುಂದೆ ಅಮೃತ ಮಹೋತ್ಸವದ 75 ನೇ ಧ್ವಜಾರೋಹಣ

ಸಾಬಣ್ಣನ ಮನೆ ಮುಂದೆ ಅಮೃತ ಮಹೋತ್ಸವದ 75 ನೇ ಧ್ವಜಾರೋಹಣ

ಫೋಟೋ: 14ಜಿಎಲ್‌ಡಿ1-ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ 

ಗುಳೇದಗುಡ್ಡ.ಆ.14 : ದೇಶ ಸ್ವತಂತ್ರ್ಯವಾದ ದಿನ ಎಲ್ಲೆಡೆ ಹಾರಾಡಿದ ರಾಷ್ಟ್ರಧ್ವಜ ಸಾಬಣ್ಣನ ಮನೆ ಮುಂದೆಯೂ ಹಾರಾಡಿತು. ಅಂದು ಹಾರಿದ ಧ್ವಜ ಇಂದಿಗೂ ತನ್ನ 75 ನೇ ವರ್ಷಾಚರಣೆ ಸಾಬಣ್ಣ ಇಲ್ಲದಿದ್ದರೂ ಅವನ ಮನೆಮುಂದೆ ಮಾಡಿಕೊಳ್ಳುತ್ತಿದೆ. ಆಗ ತನ್ನ ಮನೆ ಮುಂದೆ ಧ್ವಜಾರೋಹಣ ಮಾಡಿ ಆತ್ಮೀಯರೊಂದಿಗೆ ಸಂಭ್ರಮಪಟ್ಟ ಸಾಬಣ್ಣ ಇಂದು ಇಲ್ಲ. ಅಗಲಿ 34 ವರ್ಷಗಳೇ ಗತಿಸಿವೆ.   ತಾನು ಕಾಲವಾದ ಬಳಿಕ ಆ ಪರಂಪರೆಯನ್ನು ಕುಟುಂಬಸ್ಥರು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಜಿಲ್ಲೆಯಲ್ಲಿಯೇ ಅಪರೂಪ. ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ ಅವರ ಮನೆಮುಂದೆ ಭಾನುವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ 75 ನೇ ಧ್ವಜಾರೋಹಣದ ಸಂಭ್ರಮ. 

ಸಾಬಣ್ಣ ಶಿಂಧೆ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ. 1986ರಲ್ಲಿ ಮೃತಪಟ್ಟ ಸಾಬಣ್ಣ ತಾವು ಜೀವಂತ ಇರುವವರೆಗೆ ಸ್ವಾತಂತ್ರ್ಯೋತ್ಸವದಂದು ತಾವೇ ಅನೇಕರ ಮಧ್ಯ ಧ್ವಜಾರೋಹಣ ಮಾಡುತ್ತಿದ್ದರು. ಅವರ ನಂತರ ಅವರ ಕುಟುಂಬದವರು ಕಳೆದ 35 ವರ್ಷಗಳಿಂದ ತಮ್ಮ ಹಿರಿಯ ತಲೆಮಾರಿನ ಅಜ್ಜನ  ಸಂಪ್ರದಾಯವನ್ನು ಮುಂದೆವರೆಸಿದ್ದಾರೆ ಅವರ ಕುಟುಂಬದ ಸದಸ್ಯರು. ಅಗಸ್ಟ್‌ 15 ಬಂದರೆ ಸಾಕು ಪ್ರತಿವರ್ಷ ಇವರ ಮನೆ ಮುಂದೆ ಹಬ್ಬದ ವಾತಾವರಣ.  ಓಣಿಯಲ್ಲಿ ಯುವಕರು ಸೇರಿದಂತೆ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸುತ್ತಾರೆ. ಮಕ್ಕಳಿಗೆ ಸಿಹಿ ಹಂಚಿ ದೇಶಪ್ರೇಮ ಮೆರೆಯುತ್ತಿದ್ದಾರೆ. 

ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಇಡೀ ಬದುಕನ್ನೇ ತ್ಯಾಗಮಾಡಿ ಬ್ರೀಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯಯೋಧ ಅಗಲಿ 35 ವರ್ಷಗಳೇ ಕಳೆದರೂ ಇಲ್ಲಿನ ಕಂಠಿಪೇಟೆಯ ಅವರ ಮನೆ ಮುಂದೆ ಅವರು ಅಚರಿಕೊಂಡು ಬಂದಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆ ಮಾತ್ರ ನಿಂತಿಲ್ಲ. ಅಂದು ತಳಿರು ತೋರಣದಿಂದ ಓಣಿಯನ್ನು ಸಿಂಗರಿಸಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗುತ್ತದೆ. ಈ ಬಾರಿಯೂ ಅಗಷ್ಟ 15 ರಂದು ಶನಿವಾರ  ಬೆಳಗಿನ ಜಾವ ಸರಿಯಾಗಿ 7 ಗಂಟೆಗೆ ಇಲ್ಲಿನ  ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ ಹಾಗೂ  ಸಂಜಯ ಬರಗುಂಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. 

1ನೇ ಡಿಸೆಂಬರ್ 1907 ರಲ್ಲಿ ಜನಿಸಿದ ಸಾಬಣ್ಣ ತಮ್ಮ 10 ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಬೆಳೆಸಿಕೊಂಡಿದ್ದರು. 5 ನೇ ತರಗತಿಯವರೆಗೆ ಶಾಲೆಗೆ ಹೋದ ಅವರಿಗೆ ಹೋರಾಟದ ದಿನಗಳು ಶಾಲೆಯಿಂದ ದೂರ ಮಾಡಿದವು. ತಮ್ಮ ಇಡೀ ಬದುಕನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದರು. ಗಾಂಧೀಜಿಯವರ ಮೇಲೆ ಅನನ್ಯ ಭಕ್ತಿ-ಭಾವವಿಟ್ಟುಕೊಂಡಿದ್ದ ಸಾಬಣ್ಣ ತಾನು ವಾಸಿಸುವ ಗಲ್ಲಿಗೆ ಭಾರತಮಾತಾ ಎಂದು ಹೆಸರಿಟ್ಟಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೇಸ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಬ್ರಿಟೀಷರ ಕಣ್ಣು ತಪ್ಪಿಸಲು ಕೆಲವು ಸಲ ಸ್ತ್ರೀ ವೇಷಧರಿಸಿ ಇವರು ತಿರುಗಾಡಿದ ಉದಾಹರಣೆಗಳಿವೆ. ಟೆಲಿಪೋನ್ ತಂತಿ ಕಟ್ ಮಾಡುವುದು, ರೈಲು ಹಳಿ ಕಿತ್ತುವುದು, ಅಂಚೆಪೆಟ್ಟಿಗೆ ನಾಶಮಾಡುವುದು ಮುಂತಾದ  ಬ್ರಿಟಿಷರ ವಿರುದ್ಧದ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.  

ಸ್ವಾತಂತ್ರ್ಯದ ನಂತರ ಸಾಬಣ್ಣನಿಗೆ ಸರ್ಕಾರ ನೀಡುತ್ತಿದ್ದ ಮಾಸಾಶನವನ್ನು ಒಂದು ವರ್ಷ ಮರಳಿ ಕಳಿಸಿ ದೇಶಪ್ರೇಮ ಮೆರೆದಿದ್ದರು. ಕಾರಣ ಕೇಳಿದರೆ ದೇಶದ ರಕ್ಷಣೆಗೆ ನಿಂತ ಸೈನಿಕರ ಸೇವೆಗಾಗಿ ಎಂದು ಖುಷಿಯಿಂದ ಹೇಳುತ್ತಿದ್ದರಂತೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂದಿನಿಂದ ತಮ್ಮ ಮನೆ ಮುಂದೆ ಧ್ವಜಾರೋಹಣ ಮಾಡುತ್ತಿದ್ದ ಸಾಬಣ್ಣ 1986ರಲ್ಲಿ ಮರಣ ಹೊಂದಿದ ಬಳಿಕ ಅವರ ಕುಟುಂಬ ವರ್ಗ ಇಂದಿಗೂ ಧ್ವಜಾರೋಹಣ ಮುಂದುವರೆಸಿದ್ದು, ಭಾನುವಾರ ಕಾಂಗ್ರೇಸ್ ಮುಖಂಡರಾದ ಹೊಳಬಸು ಶೆಟ್ಟರ್ ಹಾಗೂ ಸಂಜಯ ಬರಗುಂಡಿ 75ನೇ ಧ್ವಾಜಾರೋಹಣ  ಮಾಡಲಿದ್ದಾರೆ ಎಂಬುದು ಸಂತಸದ ಸಂಗತಿ ಎನ್ನುತ್ತಾರೆ ಈ ಭಾಗದ ಜನರು. 

ಭಾರತಮಾತಾ ಗಲ್ಲಿಯತ್ತ ಶಾಸಕರು ಗಮನ ಹರಿಸಲಿ: ಸ್ವಾತಂತ್ರ್ಯ ಹೋರಾಟಗಾರ ತನ್ನ ಗಲ್ಲಿಗೆ ಅಂದು ಭಾರತಮಾತಾ ಎಂದು ಹೆಸರಿಟ್ಟು ಹೋದ. ಆದರೆ ಇಂದು ಆ ಹೆಸರು ಎಲ್ಲರೂ ಮರೆತಿದ್ದಾರೆ. ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಹೋದ ಸಾಬಣ್ಣನ ಗಲ್ಲಿಗೆ ಶಾಸಕರು ಗೌರವಿಸಿ, ಅವರು ಹೆಸರಿಟ್ಟ ಭಾರತಮಾತಾ ಗಲ್ಲಿಗೆ ಆ ಹೆಸರಿನಿಂದ ಶಾಸಕರು ಗಲ್ಲಿಯನ್ನು ಅಭಿವೃದ್ಧಿಪಡಿಸಬೇಕೆಂದು ಗಲ್ಲಿಯ ಜನರ ಆಗ್ರಹವಾಗಿದೆ. 


ಸುದ್ದಿ ಓದಿ