ಶಿಕ್ಷಕರ ಸೇವೆ ಮಾಡಲು ಅವಕಾಶ ನೀಡಿ: ಪ್ರಕಾಶ ಹುಕ್ಕೇರಿ
ಲೋಕದರ್ಶನ ವರದಿ
ಕಾಗವಾಡ 09: ಶಾಸಕ, ಸಂಸದ, ಸಚಿವ, ವಿಧಾನ ಪರಿಷತ್ ಸದಸ್ಯನಾಗಿ ಕಳೆದ 35 ವರ್ಷಗಳಿಂದ ರಾಜಕಾರಣದಲ್ಲಿದ್ದು ಜನಸೇವೆ ಮಾಡುತ್ತಾ ಬಂದಿದ್ದೇನೆ. ರಾಜ್ಯದ ಶಿಕ್ಷಕರ ಸಮಸ್ಯೆಗಳು ಎನೆಂಬುದನ್ನು ನಾನು ಚನ್ನಾಗಿ ಅರಿತಿದ್ದು, ತಮ್ಮ ಸೇವೆ ಮಾಡಲು ಇದೊಂದು ಬಾರಿಗೆ ಆಶೀರ್ವಾದ ಮಾಡುವಂತೆ ಮಾಜಿ ಸಚಿವ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮನವಿ ಮಾಡಿಕೊಂಡರು.
ಸೋಮವಾರ ದಿ. 9ರಂದು ಉಗಾರ ಖುರ್ದ ಪಟ್ಟಣದ ಶತಾಯುಷಿ ಅಲಗೌಡ ಕಾಗೆ ಕಲ್ಯಾಣ ಮಂಟಪದಲ್ಲಿ ವಾಯುವ್ಯ ಶಿಕ್ಷಕರ ಮತ್ತು ಪದವಿಧರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರಸ್ ಪಕ್ಷ ನನ್ನನ್ನು ಶಿಕ್ಷಕರ ಸಂಘದ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ತಮ್ಮೆಲ್ಲರ ಅಭಿಪ್ರಾಯ ಕೇಳಲು ಬಂದಿದ್ದೇನೆ. ಶಿಕ್ಷಕರ ಸೇವೆ ಮಾಡಲು ಇದೊಂದು ಬಾರಿಗೆ ಅವಕಾಶ ಕಲ್ಪಿಸಿಕೊಡಿ. ಶಿಕ್ಷಕ ಬಾಂಧವರು ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವುದನ್ನು ಕಂಡರೆ ಚನ್ನರಾಜ ಹಟ್ಟಿಹೊಳಿಯವರ ಹಾಗೆ ಬಹುಮತದಿಂದ ಗೆಲ್ಲುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಹೇಳಿದರು.
ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯವರು ಮಾತನಾಡಿ, ಅಭಿವೃದ್ಧಿಯ ಹರಿಕಾರರೆಂದೆ ಖ್ಯಾತಿ ಪಡೆದಿರುವ ಪ್ರಕಾಶ ಹುಕ್ಕೇರಿಯವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ, ಬಾಗಲಕೋಟ, ವಿಜಯಪುರದ ಜಿಲ್ಲೆಯ ಜನಪ್ರತಿನಿಧಿಗಳು, ಶಿಕ್ಷಕರು ನನಗೆ ಮೋಬೈಲ್ ಮೂಲಕ ಪ್ರಕಾಶ ಹುಕ್ಕೇರಿ ಒಬ್ಬ ಕೆಲಸಗಾರ, ಅವರನ್ನು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆಂದು ಹೇಳುತ್ತಿರುವುದನ್ನು ಕಂಡರೆ ರಾಜ್ಯದಲ್ಲಿಯೇ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಪ್ರೋ. ಮುರಗೇಶ ಪಾಟೀಲ ಮಾತನಾಡಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವಲ್ಲಿ ಅರುಣ ಶಹಾಪುರ ಮತ್ತು ಹಣಮಂತ ನಿರಾಣಿಯವರು ಭಾರಿ ಅನ್ಯಾಯ ಮಾಡಿದ್ದಾರೆ. 14 ಸಾವಿರ ಅತಿಥಿ ಉಪನ್ಯಾಸಕರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಹಣಮಂತ ನಿರಾಣಿ ಹಾಗೂ ಅರುಣ ಶಹಾಪೂರ ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ಪ್ರಕಾಶ ಹುಕ್ಕೇರಿ ಹಾಗೂ ಅಥಣಿ ನ್ಯಾಯಾದಿಗಳಾದ ಸುನೀಲ ಸಂಕ ಅವರು ಶಿಕ್ಷಕ ಹಾಗೂ ಪದವಿಧರರ ಕುಂದು ಕೊರತೆಗಳು ಆಲಿಸಿದರು. ವೇದಿಕೆಯ ಮೇಲೆ ಮಾಜಿ ಶಾಸಕ ಮೋಹನ ಶಹಾ, ಐನಾಪುರ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ(ಪುಟ್ಟು) ಗಾಣಿಗೇರ, ನ್ಯಾಯವಾದಿ ಸಂಜಯ ಕುಚನೂರೆ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಗುಳಪ್ಪ ಜತ್ತಿ, ಸೌರಭ ಪಾಟೀಲ, ಮುಖಂಡರಾದ ಶಿದ್ದಗೌಡ ಕಾಗೆ, ಗಜಾನನ ಯರಂಡೋಲಿ, ಅನಂತಪುರ ಘಟಕದ ಬ್ಲಾಕ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಅಪ್ಪಾಸಾಬ ಮಳಮಳಸಿ, ಅರುಣ ಗಾಣಿಗೇರ, ರಾಜು ಮದನೆ, ಉಮೇಶಗೌಡ ಪಾಟೀಲ, ಸಂಜಯ ಕುಸನಾಳೆ, ನೂರಾರು ಶಿಕ್ಷಕರು, ಹಾಗೂ ಪಧವಿದರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಕಾಗವಾಡ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ ಸ್ವಾಗತಿಸಿ ವಂದಿಸಿದರು.