ಫಲಾನುಭವಿ ರೈತರಿಗೆ ಕೃಷಿ ಪರಿಕರಗಳ ವಿತರಣೆ
ರಾಣಿಬೆನ್ನೂರ 15: ರೈತರು ಈ ರೀತಿಯ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಹೆಚ್ಚಿನ ಕೃಷಿ ಆಧಾಯ ಗಳಿಸುವಂತಾಗಬೇಕು. ಪ್ರತಿ ವರ್ಷ ಕೃಷಿಯಲ್ಲಿ ನಷ್ಠ ಅನುಭವಿಸಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು ಇದನ್ನು ಹೋಗಲಾಡಿಸಲು ರೈತರು ಕೃಷಿಯಿಂದ ಆರ್ಥಿಕವಾಗಿ ಸದೃಢರಾಗುವ ಅವಶ್ಯಕತೆಯಿದೆ ಮತ್ತು ಕೃಷಿಯಲ್ಲಿ ಹೊಸ ತಾಂತ್ರಿಕತೆ ಬಳಸಿಕೊಂಡು ಖರ್ಚನ್ನು ಕಡಿಮೆ ಮಾಡಿದರೆ ಆಧಾಯ ಹೆಚ್ಚು ಗಳಿಸಬಹುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ಹಲಗೇರಿ ರಸ್ತೆಯ ಕೃಷಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಪರಿಕರಗಳಾದ ರೋಟೊವೇಟರ್, ಎಂ.ಬಿ ಪ್ಲೋ, ಲೆವಲ್ಲರ್ ಬ್ಲೇಡ್, ಪವರ್ ವೀಡರ್, ಪವರ್ ಸ್ಫೇಯರ್, ಚಾಫ್ ಕಟರ್, ಸ್ಫ್ರೀಂಕ್ಲರ್ ಹಾಗೂ ಪಿ.ವಿ.ಸಿ ಪೈಪು ಮತ್ತು ತಾಡಪತ್ರೆಗಗಳನ್ನು ರೈತರಿಗೆ ರಿಯಾತಿ ದರದಲ್ಲಿ ವಿತರಿಸಲಾಗುತ್ತಿದ್ದು ಸರ್ವರೂ ಈ ಪರಿಕರಗಳನ್ನು ಸದುಪಯೋಗ ಪಡೆದುಕೊಂಡು ತಾವು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಮಾತನಾಡಿ, ಶಾಸಕರು ಹೆಚ್ಚಿನ ಅನುದಾನ ತರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ನಮ್ಮ ಭಾಗದ ರೈತರಿಗೆ ತುಂಬ ಅನುಕೂಲವಾಗಿ ಮತ್ತು ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಅನುದಾನ ರಾಣಿಬೆನ್ನೂರು ತಾಲ್ಲೂಕಿಗೆ ತರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಫಲಾಭವಿ ರೈತರಿಗೆ ಕೃಷಿ ಪರಿಕರಗಳನ್ನು ಶಾಸಕ ಪ್ರಕಾಶ ಕೋಳಿವಾಡ ವಿತರಿಸಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ಮತ್ತು ಸಿಬ್ಬಂದಿ, ರೈತರು ಮತ್ತು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.