ಯಶಸ್ವಿನಿ ಆಸ್ಪತ್ರೆ ಮಿನಿ ಕೆಎಲ್ಇ, ಬಿಎಲ್ಡಿ ಆಸ್ಪತ್ರೆಯಾಗಲಿ: ಮಂಗಸೂಳಿ
ಲೋಕದರ್ಶನ ವರದಿ
ಅಥಣಿ 27: ಅಥಣಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಯಶಸ್ವಿನಿ ಆಸ್ಪತ್ರೆ ಮಿನಿ ಕೆಎಲ್ಇ ಅಥವಾ ಮಿನಿ ಬಿಎಲ್ಡಿ ಆಸ್ಪತ್ರೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಅವರು ದೇಶಪಾಂಡೆ ನಗರದಲ್ಲಿರುವ ಯಶಸ್ವಿನಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಡಾ.ಆನಂದ ಕುಲಕರ್ಣಿ ಹಾಗೂ ಡಾ. ಅಮೃತ ಕುಲಕರ್ಣಿ ಇವರ ಸಾರಥ್ಯದಲ್ಲಿ ಪ್ರಾರಂಭಗೊಂಡ ಈ ಮಲ್ಟಿಸ್ಪಶಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ಎಲ್ಲ ವೈದ್ಯಕೀಯ ಉಪಕರಣಗಳು, ಶಸ್ತ್ರ ಚಿಕಿತ್ಸೆಗೆ ಬೇಕಾದ ಎಲ್ಲ ಆಧುನಿಕ ವ್ಯವಸ್ಥೆ, ಐಸಿಯು ಘಟಕ, ತೀವೃ ಅಪಘಾತಕ್ಕೋಳಗಾದಾಗ ಅವಶ್ಯವಾಗಿ ಬೇಕಾಗಬಹುದಾದ ವೈದ್ಯಕೀಯ ಚಿಕಿತ್ಸೆ ಇಲ್ಲಿ ನೀಡುವ ವ್ಯವಸ್ಥೆ ಇದೆ ಹೀಗಾಗಿ ಇಲ್ಲಿಂದ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರದ ಸಾಂಗಲಿ, ಮೀರಜ ಹಾಗೂ ಬೆಳಗಾವಿ, ವಿಜಯಪುರಗಳಿಗೆ ತೆರಳಬೇಕಾಗುತ್ತಿತ್ತು ಈ ಆಸ್ಪತ್ರೆ ಇನ್ನು ಮುಂದಿನ ದಿನಗಳಲ್ಲಿ ಈ ಅಲೆದಾಟವನ್ನು ತಪ್ಪಿಸಲಿದೆ ಎಂದರು.
ಡಾ.ಆನಂದ ಕುಲಕರ್ಣಿ ಮಾತನಾಡಿ, ನನ್ನ ತಂದೆ ದಿ.ಡಾ.ಪಾಂಡು ಕುಲಕರ್ಣಿಯವರ ಕನಸು ಇಂದು ನನಸಾಗಿದೆ. 50ಕ್ಕೂ ಹೆಚ್ಚು ವರ್ಷಗಳಿಂದ ಅಥಣಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡಿದ ಡಾ.ಪಾಂಡು ಕುಲಕರ್ಣಿಯವರು ಅಥಣಿಯ ಜನತೆಗೆ ಒಂದು ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಬಯಸಿದ್ದರು ಈ ಹಿನ್ನೆಲೆಯಲ್ಲಿ ನಾವಿಬ್ಬರು ಸಹೋದರರು ಈ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇವೆ ಎಂದ ಅವರು ನಮ್ಮ ಈ ಆಸ್ಪತ್ರೆಯಲ್ಲಿ 3 ಶಸ್ತ್ರಚಿಕಿತ್ಸೆ ಕೋಣೆಗಳು, 15 ಬೆಡ್ಗಳುಳ್ಳ ಐಸಿಯು ಯುನಿಟ್ಗಳ ಜೊತೆಗೆ ಇನ್ನೂಳಿದ ಎಲ್ಲ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಅಥಣಿ ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ.ಅಮೃತ ಕುಲಕರ್ಣಿ ಮಾತನಾಡಿ, ಯಶಿಸ್ವಿನಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಬಂದು ಅಥಣಿ ಜನತೆಗೆ ತಮ್ಮ ಸೇವೆ ಒದಗಿಸಲೆಂದು ಪ್ರಾರ್ಥಿಸುತ್ತೇನೆ ಎಂದರು. ಶೈಲಜಾ ಕುಲಕರ್ಣಿ, ಡಾ.ಪ್ರತೀಕಾ ಕುಲಕರ್ಣಿ, ತೃಪ್ತಿ ಕುಲಕರ್ಣಿ ಸೇರಿದಂತೆ ಅಥಣಿ ಐಎಮ್ಎ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.