‘ಆಡಳಿತಾರೂಢ ಸರಕಾರಕ್ಕೆ ಸಾಥ್ ನೀಡಿ ಅಭಿವೃಧ್ಧಿಗೆ ಕೈ ಜೋಡಿಸಿ’
ಇಂಡಿ 01: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷ ಹಾಗೂ ಪ್ರಾಮಾಣಿಕವಾಗಿ ಜನತೆಗೆ ಆಡಳಿತ ನೀಡುತ್ತಿದ್ದಾರೆ. ಹಲವರು ಮುಖ್ಯಮಂತ್ರಿಗಳ ಕುರಿತು ಇಲ್ಲಸಲ್ಲದ ಆರೋಪ ಮಾಡಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಕ್ಕೆ ಅಡ್ಡಗಾಲು ಹಾಕುವುದನ್ನು ಬಿಟ್ಟು ರಾಜ್ಯದ ಎಲ್ಲ ಪಕ್ಷಗಳು ಆಡಳಿತಾರೂಢ ಸರಕಾರಕ್ಕೆ ಸಾಥ್ ನೀಡಿ ಅಭಿವೃಧ್ಧಿಗೆ ಕೈ ಜೋಡಿಸಬೇಕೆ ವಿನಃ ಸುಖಾಸುಮ್ಮನೆ ಆರೋಪ ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುವುದು ಸರಿಯಾದ ನಡೆ ಅಲ್ಲ.
ಕೃಷಿಕರ ಸಮಸ್ಯೆ, ಕಾರ್ಮಿಕ ಬವಣೆ, ಬೆಳೆ ಪರಿಹಾರ, ನೆರೆ ಹಾವಳಿ, ಅತಿವೃಷ್ಠಿ ನಿರುದ್ಯೋಗ ಸಮಸ್ಯೆ, ಮುಂತಾದ ಸಮಸ್ಯೆಗಳ ಮೇಲೆ ಗಮನಹರಿಸಿ ಮುಖ್ಯಮಂತ್ರಿಗಳು ಅಭಿವೃಧ್ಧಿ ಮಾಡುತ್ತಿರುವುದು ಸಂತಸ ತಂದಿದೆ. ಹೀಗಾಗಿ ಅವರಿಗೆ ಅಭಿನಂದನೆ ಹಾಗೂ ಬೆಂಬಲ ಸೂಚಿಸುತ್ತೇವೆ ಎಂದರು.
ರಾಜ್ಯದ ಅಭಿವೃಧ್ಧಿಗೆ ಹಾಗೂ ರಾಜ್ಯದ ಜನರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಲಿದ್ದು, ಅವರಿಗೆ ಸರ್ವ ಪಕ್ಷದವರೂ ಬೆಂಬಲಿಸಿ ಅಭಿವೃಧ್ಧಿ ವಿಚಾರದಲ್ಲಿ ಕೈಜೋಡಿಸಬೇಕು. ಅಭಿವೃಧ್ಧಿ ಪರ ಕೆಲಸ ಮಾಡುವವರೊಂದಿಗೆ ಸದಾ ಮಠಾಧೀಶರು ಇರುತ್ತೇವೆ ಎಂದು ಶ್ರೀಗಳು ತಿಳಿಸಿದರು.