'ವಿದ್ಯಾರ್ಥಿಗಳು ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ '
ಹೂವಿನಹಡಗಲಿ 13: ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಹಗರಿಬೊಮ್ಮನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ವಸಂತ ಕುಮಾರ ಹೇಳಿದರು.
ಪಟ್ಟಣದ ಜಿಬಿಆರ್ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಬುಧವಾರ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಆಯೋಜಿಸಿದ್ದ 2023 ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚು ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಪದವಿಗಳು ಹೆಚ್ಚಾಗುತ್ತಿವೆ. ಆದರೆ ವೃತ್ತಿ ಕೌಶಲ್ಯಗಳ ಜ್ಞಾನ ಕಡಿಮೆ ಪ್ರಮಾಣದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮಲ್ಲಿ ಮೊದಲು ವ್ಯವಹಾರಿಕ ಜ್ಞಾನ ಹೆಚ್ವಿರಬೇಕು. ಲಾಭ, ನಷ್ಟಗಳನ್ನು ಸ್ವತಃ ಅನುಭವಿಸುತ್ತೇವೆ. ಸ್ಪರ್ಧಾತ್ಮಕ ಮನೋಭಾವನೆಯನ್ನು ಹೊಂದುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.ಉಪನ್ಯಾಸಕ ಜಾವಿದ್ ಭಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ.ಎಸ್.ಎಸ್.ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಸದಾಶಿವ, ಉಪನ್ಯಾಸಕರಾದ ಶೇಖ್ ಷಾವಲಿ, ಅನ್ನದಾನಪ್ಪ, ಉಪನ್ಯಾಸಕಿಯರಾದ ಆಶಾ, ಸಿಂಧೂ, ಅಶ್ವಿನಿ ಹಾಗೂ ಇತರ ಉಪನ್ಯಾಸರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.