ಜಿ-ಪ್ಲಸ್" ಮನೆಗೆ ವಂತಿಗೆ ಹಣ ತುಂಬಲು ಕಾಲಾವಕಾಶ ನೀಡಿ
ಬ್ಯಾಡಗಿ: ಪುರಸಭೆಯಿಂದ ಪಟ್ಟಣದ ಮಲ್ಲೂರು ರಸ್ತೆಯಲ್ಲಿ ಆಶ್ರಯ ನಿವೇಶನಕ್ಕೆ ಖರೀದಿಸಿರುವ ಜಾಗೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ, ಆಯ್ಕೆಗೊಂಡ ಫಲಾನುಭವಿಗಳಿಂದ "ಜಿ-ಪ್ಲಸ್" ಮನೆಗಾಗಿ ವಂತಿಗೆ ಹಣ ತುಂಬಿಸಿಕೊಳ್ಳಲು ನೀಡಿರುವ ಕಡಿಮೆ ಅವಧಿಯ ಕಾಲವಕಾಶವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ಫಲಾನುಭವಿಗಳಿಗೆ ಅನುಕೂಲತೆಯನ್ನು ಒದಗಿಸಿ ಕೊಡಬೇಕೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಈ ಬಗ್ಗೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಮಲ್ಲೂರು ರಸ್ತೆಯಲ್ಲಿ ಆಶ್ರಯ ನಿವೇಶನದಲ್ಲಿ "ಜಿ-ಪ್ಲಸ್" ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿ ವಂತಿಗೆ ಹಣ ತುಂಬಿಸಿಕೊಳ್ಳಲು ಫೆಬ್ರುವರಿ 28 ಕೊನೆಯ ದಿನವೆಂದು ಪುರಸಭಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಾವಳಿಯಿಂದ ತತ್ತರಿಸಿದ ಜನರಿಗೆ ಕೆಲವೇ ದಿನಗಳಲ್ಲಿ ವಂತಿಗೆ ಹಣ ತುಂಬಲು ತೊಂದರೆಯಾಗುತ್ತಿದ್ದು, ಈ ಬಗ್ಗೆ ತಾವು ಪರೀಶೀಲನೆ ನಡೆಸಿ ಒಂದು ವರ್ಷದ ಅವಧಿಯನ್ನು ನೀಡಿದರೆ ಬಡಜನರಿಗೆ ವಂತಿಗೆ ಹಣ ತುಂಬಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಈ ಹಿಂದೆ ಆಶ್ರಯ ನಿವೇಶನ/ಮನೆಗಾಗಿ ಆಯ್ಕೆ ಮಾಡಿ ಪ್ರಕಟ ಮಾಡಲಾದ 814 ಫಲಾನುಭವಿಗಳ ಪಟ್ಟಿಯಲ್ಲಿ 133 ಫಲಾನುಭವಿಗಳ ಆಧಾರ್ ಕಾರ್ಡ್ ಹೊಂದಾಣಿಕೆ ಮತ್ತು ಇತರ ವಿವರಗಳನ್ನು ಒದಗಿಸಿಲ್ಲ ಎಂದು ರದ್ದು ಪಡಿಸಿರುವುದು ಸರಿಯಲ್ಲ. ಸದರಿ ಫಲಾನುಭವಿಗಳಿಗೆ ನೋಟಿಸ್ ನೀಡಿ ಕಾಲಾವಕಾಶ ನೀಡಬೇಕು. "ಜಿ-ಪ್ಲಸ್" ಮನೆಗಳನ್ನು ನಿರ್ಮಿಸುವ ಜಾಗೆಯಲ್ಲಿ ರಸ್ತೆ, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿಲ್ಲ. ಸದರಿ "ಜಿ-ಪ್ಲಸ್" ಮನೆಯ ನಿರ್ಮಾಣಕ್ಕೆ ಫಲಾನುಭವಿಯ ಬ್ಯಾಂಕಿನಿಂದ ಪಡೆಯುವ ಸಾಲದ ಮೊತ್ತ ಎಷ್ಟು.? ಅದಕ್ಕೆ ವಿಧಿಸುವ ಬಡ್ಡಿದರ ಹಾಗೂ ಪ್ರತಿ ತಿಂಗಳು ತುಂಬಬೇಕಾದ ಕಂತಿನ ಹಣದ ಕುರಿತಂತೆ ಯಾವುದೇ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸದೇ ಅವರಿಂದ ವಂತಿಗೆ ಹಣವನ್ನು ತುಂಬಿಸಿಕೊಳ್ಳುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂಬ ಸ್ಪಷ್ಟತೆ ಇಲ್ಲದಂತಾಗಿದೆ. ’ಡಿಪಿಎಆರ್’ ಕೇವಲ ಮನೆ ನಿರ್ಮಾಣಕ್ಕಾಗಿ ಮಾತ್ರವೇ..ಅಥವಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವೆಚ್ಚವನ್ನು ಸೇರಿಸಲಾಗಿದೆಯೇ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಮನವಿ ಪತ್ರದ ಮೂಲಕ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.