“ಕನ್ನಡ ಜೈಮಿನಿ ಭಾರತ''ಕನ್ನಡ ಕಾವ್ಯ ಪರಂಪರೆಯ ಅತ್ಯುತ್ಕೃಷ್ಟ ಷಟ್ಪದಿ
“ಕನ್ನಡ ಜೈಮಿನಿ ಭಾರತ''ಕನ್ನಡ ಕಾವ್ಯ ಪರಂಪರೆಯ ಅತ್ಯುತ್ಕೃಷ್ಟ ಷಟ್ಪದಿ
ಧಾರವಾಡ 25: ಪಂಡಿತರು, ಪಾಮರರೆಲ್ಲ ಅತ್ಯಂತ ಪ್ರೀತಿಯಿಂದ ಎದೆಗೊತ್ತಿಕೊಂಡ ಚಮತ್ಕಾರಿಕ ಶೈಲಿ, ಸೂಕ್ತ ಉಪಮೆಗಳು, ಪುನರುಕ್ತಿ, ಸಹೋಕ್ತಿ, ಅಲಂಕಾರ, ಭಾವರಸಗಳ ಸೂಕ್ತ ಬಳಕೆಯಿಂದಾಗಿ ನಾದಲೋಲ ಲಕ್ಷ್ಮೀಶನ “ಕನ್ನಡ ಜೈಮಿನಿ ಭಾರತ''ವು ಕನ್ನಡ ಕಾವ್ಯ ಪರಂಪರೆಯ ಒಂದು ಅತ್ಯುತ್ಕೃಷ್ಟ ಷಟ್ಪದೀ ಕಾವ್ಯವಾಗಿ ಅರಳಿ ನಿಂತಿದೆ ಎಂದು ಕಿಟಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ರಮೇಶ ಗೋಡಬೋಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ದಿ. 23-11-2024 ರಂದು ಸಾಧನಕೇರಿಯ “ಚೈತ್ರ''ದ ಸಭಾಗೃಹದಲ್ಲಿ ಹಮ್ಮಿಕೊಂಡ ನಾದಲೋಲ ಲಕ್ಷ್ಮೀಶನ “ಕನ್ನಡ ಜೈಮಿನಿ ಭಾರತ'' ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾಡನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಸ್ವತಃ ಕವಿಯೇ ಹೇಳಿಕೊಂಡಿರುವಂತೆ ಇದು ಕೇವಲ ಅಶ್ವಮೇಧದ ಕಥೆಯಾಗಿರದೇ ಹಲವು ಸುಂದರ ಕಥೆಗಳದೊಂದು ಕಥಾಗುಚ್ಛವಾಗಿದ್ದು ನೀಲಧ್ವಜ, ಜ್ವಾಲೆಯರ ಕಥೆ, ಮತ್ತು ಹಂಸಧ್ವಜ, ಸುಧನ್ವ, ಪ್ರಭಾವತಿಯರ ಪ್ರಸಂಗಗಳನ್ನು ರೋಚಕವಾಗಿ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಅವರು ಮಾನತಾಡಿ ಕುಮಾರ ವ್ಯಾಸ ಭಾರತ ಮತ್ತು ಲಕ್ಷ್ಮೀಶನ ಜೈಮಿನೀ ಭಾರತಗಳೆಂದರೆ ಕನ್ನಡಿಗರ ಹೃದಯಗೆದ್ದ ಕೃತಿಗಳಾಗಿದ್ದು ಒಂದು ಕಾಲಕ್ಕೆ ಕಲಿತವರೂ, ಕಲಿಯದವರೂ ಒಟ್ಟಾಗಿಯೇ ಈ ಕಾವ್ಯಗಳ ಸುರಸ ಗಮಕವಾಚನ ಕೇಳಿ ಆನಂದ ಪಡುತ್ತಿದ್ದರು. ಜೀವಪರ ಮತ್ತು ಸ್ತ್ರೀಪರ ನಿಲುವಿನ ಮಹಾಕವಿ ಲಕ್ಷ್ಮೀಶನ ‘ಜೈಮಿನಿಭಾರತ'ವೆಂದರೆ ಜನರನ್ನು ಸನ್ಮಾರ್ಗಕ್ಕೆ ಹಚ್ಚುವಂತಹ ಕನ್ನಡದ ಉತ್ಕೃಷ್ಟ ರಸಗಟ್ಟಿಯಾಗಿದೆ ಎಂದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ರಾಜೀವ ಪಾಟೀಲ ಕುಲಕರ್ಣಿ, ಪ್ರೊ. ದುಷ್ಯಂತ ನಾಡಗೌಡ, ಡಾ. ಅರವಿಂದ ಯಾಳಗಿ, ಪ್ರೊ. ಮಧುಕರ ಯಕ್ಕುಂಡಿ, ಮಹಾಬಳೇಶ್ವರ ಸಿಂದಗಿ, ಡಾ. ರುದ್ರಣ್ಣ ಚಿಲುಮಿ, ಶ್ರೀನಿವಾಸ ಹುದ್ದಾರ ಡಾ. ಅರುಣ ಅಂಗಡಿ, ಅನಂತ ಸಿದ್ಧೇಶ್ವರ, ಎಸ್.ಬಿ. ದ್ವಾರಪಾಲಕ, ಕೆ.ಎಂ.ಅಂಗಡಿ, ಕುಮಾರಸ್ವಾಮಿ ಪುರಾಣಿಕಮಠ, ಆರ್.ಎಂ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಎಂ.ವಿ. ಹೊಸಮನಿ, ಡಾ. ಮಂದಾಕಿನಿ ಪುರೋಹಿತ, ವಿನುತಾ ಹಂಚಿನಮನಿ, ಸುನಂದಾ ಗೋಡಬೋಲೆ, ಪೂಜಾ. ಪಿ. ಕುಲಕರ್ಣಿ, ಶುಭದಾ ಘಾಣೇಕರ, ಮಂಗಲ ಫಾಟಕ, ಸೀಮಾ ಪರಾಂಜಪೆ, ಮುಂತಾದವರು ಉಪಸ್ಥಿತರಿದ್ದರು.