ಜುಗೂಳ ಗ್ರಾಮ ಪಂಚಾಯತಿಗೆ “ಗಾಂಧಿ ಗ್ರಾಮ” ಪುರಸ್ಕಾರ
; ಬೆಳಗಾವಿ ಜಿಲ್ಲೆಯ 15 ಗ್ರಾಮ ಪಂಚಾಯತಿಗಳು ಈ ಪ್ರಶಸ್ತಿಗೆ ಆಯ್ಕೆ..!
ಕಾಗವಾಡ 07: ಈ ಬಾರಿಯ ರಾಜ್ಯ ಮಟ್ಟದ ಪ್ರತಿಷ್ಠಿತ “ಗಾಂಧಿ ಗ್ರಾಮ” ಪುರಸ್ಕಾರವನ್ನು ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಜುಗೂಳ ಗ್ರಾಮ ಪಂಚಾಯಿತಿ ತನ್ನದಾಗಿಸಿಕೊಂಡಿದ್ದು, 23-24 ನೇ ಸಾಲಿನ ಪುರಸ್ಕಾರಕ್ಕೆ ಭಾಜನವಾಗಿ ಗ್ರಾಮದ ಅಭಿವೃದ್ಧಿಗೆ ಪೂರಕ ಪಂಚಾಯಿತಿ ಎಂಬ ಹಿರಿಮೆಗೆ ಪಾತ್ರವಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಒದಗಿಸುವ ಮೂಲಸೌಕರ್ಯ ಹಾಗೂ ಸೇವೆಗಳ ಜೊತೆಗೆ ಅತ್ಯುತ್ತಮ ಆಡಳಿತ ನೀಡುವುದನ್ನು ಸಹ ಈ ಆಯ್ಕೆಯ ಮಾನದಂಡಗಳನ್ನಾಗಿಸಿರುವುದು ಈ ವರ್ಷದ ವಿಶೇಷವಾಗಿದೆ. ಇದೇ ವೇಳೆ ಈ ಪ್ರಶಸ್ತಿಗೆ ರಾಜ್ಯದ ಗಡಿಯ ಬೆಳಗಾವಿ ಜಿಲ್ಲೆಯ 15 ಗ್ರಾ.ಪಂ.ಗಳು ಆಯ್ಕೆಯಾಗುವ ಮೂಲಕ ಗಮನ ಸೆಳೆದು, ಮಾದರಿ ಗ್ರಾ.ಪಂ.ಗಳಾಗಿ ಹೊರಹೊಮ್ಮಿವೆ.
ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಸಾಧನೆ ತೋರಿದ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಈಗಾಗಲೇ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಯು 3 ಬಾರಿ ಪಡೆದುಕೊಂಡು, ಹ್ಯಾಟ್ರಿಕ್ ಸಾಧನೆ ಮಾಡಿದೆ. ಈಗ ಜುಗೂಳ ಗ್ರಾ.ಪಂ.ಯು ಈ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಇತರೇ ಗಾ.್ರಪಂ.ಗಳಿಗೆ ಮಾದರಿಯಾಗುವ ಜೊತೆಗೆ ರಾಜ್ಯದಲ್ಲಿಯೇ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ.
ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಜುಗೂಳ, ಮಂಗಾವತಿ ಮತ್ತು ಶಹಾಪೂರ ಗ್ರಾಮಗಳು ಒಳಪಟ್ಟಿದ್ದು, ಒಟ್ಟು 11 ವಾರ್ಡ್ಗಳು ಮತ್ತು 30 ಸದಸ್ಯರಿದ್ದಾರೆ. ಗ್ರಾಮದಲ್ಲಿ ಒಟ್ಟು 3200 ಕುಟುಂಬಗಳಿದ್ದು, 2011 ರ ಜನಗಣತಿ ಪ್ರಕಾರ 12157 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಶೇ. 78 ಕ್ಕೂ ಹೆಚ್ಚು ಸಾಕ್ಷರತೆ ಪ್ರಮಾಣವಿದ್ದು, ಕೃಷಿಯೇ ಇಲ್ಲಿನ ಬಹುತೇಕ ಜನರ ಪ್ರಮುಖ ವೃತ್ತಿಯಾಗಿದೆ. ಕೃಷ್ಣಾ ನದಿ ತೀರದಲ್ಲಿರುವ ಕರ್ನಾಟಕದ ಮೊದಲ ಗ್ರಾಮ ಪಂಚಾಯತಿ ಇದಾಗಿದ್ದು, ಪ್ರತಿ ವರ್ಷ ಪ್ರವಾಹ ಭೀತಿ ಎದುರಿಸಿ, ಪುರಸ್ಕಾರ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಗ್ರಾಮದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರಿ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನ, ಮೂಲಸೌಕರ್ಯಗಳ ಅಭಿವೃದ್ಧಿ, ಆಡಳಿತದಲ್ಲಿ ಸುಧಾರಣೆ ಹಾಗೂ ಸ್ವಚ್ಛತೆಯ ಸಾಧನೆಗಾಗಿ ಈ ಪುರಸ್ಕಾರ ದೊರೆತಿದೆ.
ಶಾಸಕ ರಾಜು ಕಾಗೆ ಮತ್ತು ಗ್ರಾಮದ ಹಿರಿಯ ಮುಖಂಡರ ಮಾರ್ಗದರ್ಶನ, ಅಧ್ಯಕ್ಷ-ಉಪಾಧ್ಯಕ್ಷರ ಹಾಗೂ ಎಲ್ಲ ಸದಸ್ಯರ ಸಹಕಾರ ಜೊತೆಗೆ ಗ್ರಾಮ ಪಂಚಾಯತಿಯ ಸಿಬ್ಬಂದಿಗಳ ಶ್ರಮದಿಂದಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಜುಗೂಳ ಗ್ರಾಮ ಪಂಚಾಯತಿ ಜಿಲ್ಲೆಯ ಗಮನ ಸೆಳೆದಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜುಗೂಳ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಇವರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ಜೊತೆಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ.
ಗ್ರಾಮದ ಅಭಿವೃದ್ಧಿಯ ಆಧಾರದ ಮೇಲೆ ಈ ಪ್ರಶಸ್ತಿ ಲಭಿಸಿದ್ದು, ಸಂತಸ ಮೂಡಿಸಿದೆ. ಇದಕ್ಕೆ ಎಲ್ಲ ಸದಸ್ಯರ, ಸಿಬ್ಬಂದಿ ವರ್ಗದವರ ಪರಿಶ್ರಮವೇ
ಕಾರಣವಾಗಿದೆ. ಈ ಪ್ರಶಸ್ತಿಯು ನಮ್ಮ ಸೇವೆ ಮತ್ತು ಜವಾಬ್ದಾರಿಯನ್ನು ಇನಷ್ಟು ಹೆಚ್ಚಿಸಿದೆ.
-- ಶೈಲಶ್ರೀ ಬಜಂತ್ರಿ, ಪಿಡಿಒ, ಜುಗೂಳ ಗ್ರಾ.ಪಂ.
ಗ್ರಾಮ ಪಂಚಾಯತಿಯಲ್ಲಿ ಈಗ ಯುವಕರ ಪಡೆಯೇ ಹೆಚ್ಚಾಗಿ ಸದಸ್ಯರಾಗಿ ಕಾರ್ಯನಿರ್ವಹಿಸಿತ್ತಿದ್ದು, ಅವರ ಉತ್ಸಾಹ ಮತ್ತು ಹಾಲಿ ಶಾಸಕರ
ಸಹಕಾರದೊಂದಿಗೆ ಗ್ರಾಮಕ್ಕೆ ಈ ಪ್ರಶಸ್ತಿ ಲಭಿಸಿದ್ದು, ಜೊತೆಗೆ ಗ್ರಾಮವು ಅಭಿವೃದ್ಧಿ ಕಡೆಗೆ ಸಾಗಿರುವುದು ಹೆಮ್ಮೆಯ ಜೊತೆಗೆ ಸಂತಸ ಮೂಡಿಸಿದೆ.
- ಕಾಕಾಸಾಬ ಪಾಟೀಲ, ಅಧ್ಯಕ್ಷರು, ಜುಗೂಳ ಗ್ರಾ.ಪಂ.