ಕಾರವಾರ

ಕಾರವಾರದಲ್ಲಿ ಸಜ್ಜೇಶ್ವರ ದರ್ಶನಕ್ಕೆ ಸಾಲು - ಗೋಕರ್ಣದಲ್ಲಿ ಭಕ್ತರ ಸಂಖ್ಯೆ ಇಳಿಮುಖ

ಕಾರವಾರದಲ್ಲಿ ಸಜ್ಜೇಶ್ವರ ದರ್ಶನಕ್ಕೆ ಸಾಲು - ಗೋಕರ್ಣದಲ್ಲಿ ಭಕ್ತರ ಸಂಖ್ಯೆ ಇಳಿಮುಖ

ಮಹಾಶಿವರಾತ್ರಿಗೆ ಭಕ್ತರ ಸಾಲು ಸಾಲು : ಕೋವಿಡ್ ಕಾರಣ ತಗ್ಗಿದ ಉತ್ಸಾಹ ; ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಾರವಾರ : ಮಹಾಶಿವರಾತ್ರಿ ಉತ್ತರ ಕನ್ನಡದಲ್ಲಿ ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ಜಾಗರಣೆಗೆ ಮುನ್ನ , ಭಕ್ತರು ಶಿವ ಹಾಗೂ ಶಿವಲಿಂಗದ ದರ್ಶನ ಪಡೆದು ಹಾಲಿನ ಅಭಿಷೇಕ ಮಾಡಿಸಿದರು. ಗೋಕರ್ಣದಲ್ಲಿ ವಿಶೇಷ ಕಟ್ಟು ನಿಟ್ಟು , ಮಾಸ್ಕ ಕಡ್ಡಾಯ ಹಾಗೂ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಿದ ಕಾರಣ ಭಕ್ತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖ ಕಂಡು ಬಂತು. ಹೆಂಗಸರು, ಯುವತಿಯರು ಟೀಶರ್ಟ, ಶಾರ್ಟ, ಜೀನ್ಸ ಧರಿಸುವಂತಿಲ್ಲ ಎಂಬ ನಿಯಮವನ್ನು ಕಡ್ಡಾಯವಾಗಿ ಹೇರಲಾಗಿತ್ತು. ಇದರಿಂದ ಮಹಿಳಾ ಭಕ್ತರ ಸಂಖ್ಯೆ ಈ ಸಲ ಕುಸಿದಿತ್ತು. ಗಂಡಸರು ಪಂಚೆ,ಶಾಲು ಕಡ್ಡಾಯವಾಗಿ ಧರಿಸಬೇಕೆಂದು ಹೇಳಿದ ಕಾರಣ ಭಕ್ತರು ಅನಿವಾರ್ಯವಾಗಿ ಶಿವಾಲಯದ ನಿಯಮಗಳನ್ನು ಪಾಲಿಸಿದರು. ಕಡಲದಂಡೆಗೆ ತೆರಳಿ ಸಮುದ್ರ ಸ್ನಾನ ಮಾಡಿ, ಮರಳಿನ ಲಿಂಗ ರೂಪಿಸಿ, ಕೈ ಮುಗಿದು, ದೇವರ ದರ್ಶನ ಪಡೆದರು. ಹಾಗೂ ಶಿವನಿಗೆ ಹರಕೆ ತೀರಿಸಿದರು.

ಸ್ಥಳೀಯರಿಗೆ ಶಿವಲಿಂಗ ದರ್ಶನಕ್ಕೆ ಹೆಚ್ಚು ಸಮಯ ಕಾಯದಂತೆ ಮಾಡಲು ದೇವಸ್ಥಾನದವರು ವಿಶೇಷ ಪಾಸ್ ನೀಡಿದ್ದರು. ಸ್ಥಳೀಯರು ಹಾಗೂ ಗೋಕರ್ಣ ಸುತ್ತಮುತ್ತ ಜನರು ಶಿವಲಿಂಗ (ಆತ್ಮಲಿಂಗ ) ದರ್ಶನಕ್ಕೆ ಕಾಯಬೇಕಾದ ಸನ್ನಿವೇಶ ಇರಲಿಲ್ಲ. ಕಾರವಾರದ ಶಿವ ದೇವಾಲಯಗಳಲ್ಲಿ ಭಕ್ತರು ತಮ್ಮ ತೂಕದ ಹಣ್ಣು ಕಾಯಿ, ಬಾಳೆ ಹಣ್ಣನ್ನು ತಕ್ಕಡಿಯಲ್ಲಿ ತೂಗಿಸುವ ತುಲಾಭಾರದ ಸೇವೆ ಸಲ್ಲಿಸಿದರು. ಸಜ್ಜೇಶ್ವರ ದೇವಾಲಯದಲ್ಲಿ ಭಕ್ತರು ಸಾಲುಗಟ್ಟಿ ನಿಂತು ಹರಕೆ ತೀರಿಸಿದರು. ಶಿವಲಿಂಗಕ್ಕೆ ಹಾಲು ಎಳೆ ನೀರು ಸೇವೆ ಅರ್ಪಿಸಿದರು. ಮಹಾದೇವ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. 

ಬೇಡ್ತಿ ನದಿಯ ಭಾಗದ ಸಹಸ್ರಲಿಂಗದ ಪ್ರವಾಸಿತಾಣದಲ್ಲಿ ಸಹ ಭಕ್ತರು ಪೂಜೆ ಸಲ್ಲಿಸಿದರು. ಹಲವರು ಯಾಣಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದರು. ಜಿಲ್ಲೆಯ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಮರುಡೇಶ್ವರದಲ್ಲಿ ಸಹ ಭಕ್ತರು ಶಿವನಿಗೆ ಪೂಜೆ ಹರಕೆ ಸಲ್ಲಿಸಿದರು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಭಕ್ತರು ಮುರುಡೇಶ್ವರಕ್ಕೆ ಆಗಮಿಸಿದ್ದರು. ಗುಣವಂತೆಯ ಗುಣವಂತೇಶ್ವರ ಮತ್ತು ಧಾರೇಶ್ವರದ ಧಾರೇಶ್ವರನಿಗೆ ಸಹ ವಿಶೇಷ ಪೂಜೆಗಳು ನಡೆದವು. ಶಿರಸಿಯಲ್ಲಿ ಅಕಾಲಿಕವಾಗಿ ಬಿದ್ದ ಭಾರೀ ಮಳೆ ಶಿವರಾತ್ರಿಗೆ ಕೊಂಚ ಅಡ್ಡಿಯುಂಟು ಮಾಡಿತು. ಆದರೂ ಮಳೆ ಸುರಿವ ಮುನ್ನ ಹಲವರು ಶಿವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದರು. 


ಸುದ್ದಿ ಓದಿ