ಕಾರವಾರ

ಕಡವೆ ಬೇಟೆ ; ಓರ್ವನ ಬಂಧನ

ಕಡವೆ ಬೇಟೆ ; ಓರ್ವನ ಬಂಧನ
ಕಾರವಾರ: ಕಡವೆಯ  ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ಗುಂಪಿನ  ಮೇಲೆ ಅರಣ್ಯಾಧಿಕಾರಿಗಳು ಅಂಕೋಲಾದ ಕಲ್ಲೇಶ್ವರ ಗ್ರಾಮದ  ತೋಟ ಒಂದರಲ್ಲಿ  ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.  ಅ.16ರ ರಾತ್ರಿ ಕಲ್ಲೇಶ್ವರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ನಾಲ್ವರು  ಪರಾರಿಯಾಗಿದ್ದಾರೆ.
ತಾಲೂಕಿನ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಅವರ ಅಡಿಕೆ ತೋಟದಲ್ಲಿ,  ಕಡವೆ ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗುಳಿ ವಲಯದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು.  ಕಡವೆಯನ್ನು ಕೊಂದು, ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ತಂಡ ಕಂಡು ಬಂದಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಬಂಧಿತ ಆರೋಪಿಯಾಗಿದ್ದು, ಅವರನ್ನು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.  ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ  ಇದ್ದರು 
ಎನ್ನಲಾದವರ  ಪತ್ತೆಗೆ ಶೋಧ ಮುಂದುವರಿದಿದೆ.ದಾಳಿಯ ವೇಳೆ ಕಡವೆಯ ಮಾಂಸ,  ಮೂರು ಕತ್ತಿ, ಒಂದು ಚಾಕು ಹಾಗೂ ಹೆಡ್‌ಟಾರ್ಚ್‌ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಂದಾಜು 1.5 ಲಕ್ಷ  ಬೆಲೆಯ  ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.  ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


ಸುದ್ದಿ ಓದಿ