ಭಾರತದ ನೌಕಾಶಕ್ತಿಗೆ ಐಎನ್ಎಸ್ ಸಮರ್ಥಕ್ ಬಲ : ಉಪ ರಾಷ್ಡ್ರಪತಿ ಸಿ.ಪಿ. ರಾಧಾಕೃಷ್ಣ್ಣನ್
ಲೋಕದರ್ಶನ ವರದಿ
ಕಾರವಾರ 16:- ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ “ಐಎನ್ಎಸ್ ಸಮರ್ಥಕ್” ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಹೆಚ್ಚಿನ ಬಲ ನೀಡಿದೆ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣ್ಣನ್ ಹೇಳಿದರು. ಅವರು ಶುಕ್ರವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ಸಮರ್ಥಕ್ನ್ನು ಭಾರತೀಯ ನೌಕಾಪಡೆಗೆ ಸೇರೆ್ಡಗೊಳಿಸಿ ಮಾತನಾಡಿದರು.
ಐಎನ್ಎಸ್ ಸಮರ್ಥಕ್ ಸೇರೆ್ಡಯು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಹಾಗೂ ಅತ್ಯಾಧುನಿಕ ಸ್ವದೇಶಿ ನೌಕಾ ಸಾಮರ್ಥ್ಯಗಳ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಶೇ.75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಈ ನೌಕೆಯು, ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯು ಇನ್ನು ಕೇವಲ ಆಶಯವಾಗಿ ಉಳಿಯದೇ ವಾಸ್ತವವಾಗಿ ಸಾಕಾರಗೊಳ್ಳುತ್ತಿದೆ. ಪ್ರಧಾನಿ ಅವರ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇದು ಬಲ ನೀಡಿದೆ ಎಂದು ಉಪರಾಷ್ಟ್ರಪತಿ ಹೇಳಿದರು.