ಬಿಜೆಪಿ ಮತ್ತು ಮೋದಿ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ
ಕಾರವಾರ 16 : ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ದೇಶದ ಪ್ರಸ್ತುತ ವಿದ್ಯಮಾನಗಳ ಕುರಿತು ಸಚಿವ ಸಂತೋಷ ಲಾಡ್ ತೀವ್ರ ಟೀಕೆ ವ್ಯಕ್ತಪಡಿಸಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಅಂಬಾನಿ ಮತ್ತು ಅದಾನಿ ಅವರ ಹಿಡಿತದಲ್ಲಿದೆ ಎಂದು ಆರೋಪಿಸಿದರು.
ಹೋರಾಟ ನಡೆಸುವ ಯುವಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ದೆಹಲಿಯಲ್ಲಿ ಸಿಜೆಪಿಯನ್ನು ಹತ್ತಿಕ್ಕಲಾಗುತ್ತಿದ್ದು, ಯುವ ಪತ್ರಕರ್ತರ ಮೇಲೂ ಹಲ್ಲೆ ನಡೆಸಲಾಗುತ್ತಿದೆ ಎಂದು ದೂರಿದರು.ಯುವಕರಿಗೆ ವಿದೇಶಿ ಬೆಂಬಲವಿದೆ, ಅವರು ದೇಶದ್ರೋಹಿಗಳು ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ತನ್ನ ಸಾಧನೆಗಳ ಆಧಾರದಲ್ಲಿ ಮತ ಕೇಳುವ ಬದಲು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದೆ ಎಂದು ಟೀಕಿಸಿದರು.
ಕಳೆದ 12 ವರ್ಷಗಳಲ್ಲಿ ಬಿಜೆಪಿ ಸರ್ಕಾರ 225 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ. 1.25 ಲಕ್ಷ ಶಾಲೆಗಳು ಮುಚ್ಚಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ಶಿಕ್ಷಣ ಸಂಸ್ಥೆಗಳ ಶುಲ್ಕ ಮತ್ತು ಡೊನೇಷನ್ ಹೆಚ್ಚಳದ ಸಮಸ್ಯೆಗಳು ಮುಂದುವರಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.