ತಾಳಿಕೋಟಿಯಲ್ಲಿ ಶ್ರೀದೇವಿ ಮಹಾಪುರಾಣ: ಮಹಿಷಾಸುರ ಮರ್ದನದ ಮಹಿಮೆ ವರ್ಣನೆ
ತಾಳಿಕೋಟಿ 16: ಶರನ್ನವರಾತ್ರಿ ಪ್ರಯುಕ್ತ ಪಟ್ಟಣದ ಎಸ್.ಕೆ. ನಗರದಲ್ಲಿರುವ ಬನ್ನಿ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಶ್ರೀದೇವಿ ಮಹಾಪುರಾಣ ಕಾರ್ಯಕ್ರಮದ ಐದನೇ ದಿನ ಭಕ್ತಿಭಾವದಿಂದ ಜರುಗಿತು.
ಈ ಸಂದರ್ಭದಲ್ಲಿ ವೇ. ಮೂ. ಬಸಯ್ಯ ಸೋಮಶೇಖರಮಠ ಯಾಳಗಿ ಅವರು ಚಿದಾನಂದ ದೂತರು ರಚಿಸಿದ ದೇವಿ ಮಹಾತ್ಮೆಯ ಪೌರಾಣಿಕ ಪ್ರಸಂಗಗಳನ್ನು ಸವಿಸ್ತಾರವಾಗಿ ವಿವರಿಸಿದರು. ಬಿಡಾಲ್ ರಾಕ್ಷಸನ ಸಂಹಾರ ಹಾಗೂ ಮಹಿಷಾಸುರ ಮರ್ದನದ ಪ್ರಸಂಗಗಳನ್ನು ಮನಮುಟ್ಟುವಂತೆ ನಿರೂಪಿಸಿ, ನೆರೆದಿದ್ದ ಭಕ್ತರನ್ನು ಭಕ್ತಿರಸದಲ್ಲಿ ಮಿಂದೇಳುವಂತೆ ಮಾಡಿದರು.
ದುಷ್ಟಶಕ್ತಿಗಳ ಸಂಹಾರ ಹಾಗೂ ಧರ್ಮದ ಪುನರ್ಸ್ಥಾಪನೆಗಾಗಿ ಆದಿಶಕ್ತಿಯು ತಾಳುವ ಉಗ್ರ ಸ್ವರೂಪವನ್ನು ವಿವರಿಸಿದ ಅವರು, ಅಧರ್ಮ ಮತ್ತು ಅಹಂಕಾರ ಎಷ್ಟೇ ಬಲಿಷ್ಠವಾಗಿದ್ದರೂ ದೈವಶಕ್ತಿಯ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಸಾರಿದರು.
ಮಹಿಷಾಸುರನು ತನ್ನ ಬಲ ಮತ್ತು ಅಹಂಕಾರದಿಂದ ದೇವತೆಗಳಿಗೆ ಕಿರುಕುಳ ನೀಡಿ ದೇವಲೋಕವನ್ನು ವಶಪಡಿಸಿಕೊಂಡಿದ್ದನು. ಆತನ ಅಟ್ಟಹಾಸದಿಂದ ಮುಕ್ತಿ ಪಡೆಯಲು ದೇವತೆಗಳು ಆದಿಶಕ್ತಿಯ ಮೊರೆ ಹೋದಾಗ, ಭಕ್ತರ ರಕ್ಷಣೆ ಹಾಗೂ ಧರ್ಮದ ಪುನರ್ಸ್ಥಾಪನೆಗಾಗಿ ಮಹಾದೇವಿಯು ಉಗ್ರರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು ಎಂದು ವಿವರಿಸಿದರು. ದೇವಿಯು ದುಷ್ಟರನ್ನು ಸಂಹರಿಸುವ ಉಗ್ರರೂಪದ ಜೊತೆಗೆ ಶರಣಾಗಿ ಬಂದ ಭಕ್ತರನ್ನು ಕಾಪಾಡುವ ಕರುಣಾಮಯಿ ತಾಯಿಯೂ ಆಗಿದ್ದಾಳೆ.
ಸಂಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂಬ ಜೀವನ ಸಂದೇಶವನ್ನು ದೇವಿ ಮಹಾತ್ಮೆಯ ಪ್ರಸಂಗಗಳು ಸಾರುತ್ತವೆ ಎಂದು ಬಸಯ್ಯ ಶಾಸ್ತ್ರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವ ನಗರ, ಗಣೇಶ ನಗರ ಹಾಗೂ ಎಸ್.ಕೆ. ನಗರದ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ದೇವಿ ಪುರಾಣವನ್ನು ಆಲಿಸಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕಿನ ವ್ಯವಸ್ಥಾಪಕರಾದ ಚಂದ್ರಶೇಖರ ಮಾಲಿಪಾಟೀಲ ಅವರು ಭಕ್ತಾದಿಗಳಿಗೆ ಪ್ರಸಾದ ಸೇವೆ ನೆರವೇರಿಸಿದರು.