ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಸಮರ; ಶಿರಸಿಯಲ್ಲಿ ಬೃಹತ್ ಪ್ರತಿಭಟನೆ
ಕಾರವಾರ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ , ಡಿಸಿಸಿ ಜಿಲ್ಲಾಧ್ಯಕ್ಷ ಜಿ.ಟಿ.ನಾಯ್ಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಶಿರಸಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.ಮತದಾರರ ಪಟ್ಟಿಯ ಪಾವಿತ್ರ್ಯ ಮತ್ತು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಹಕ್ಕು ಚಲಾಯಿಸುವ ಅವಕಾಶ ಸಿಗಬೇಕು.
ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.ಶಿರಸಿ ನಗರದ ಬಿಡ್ಕಿಬೈಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸೋಮವಾರ ಕಾಂಗ್ರೆಸ್ ಜಿಲ್ಲಾ ಘಟಕ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ–ದೇಶ ಬಚಾವೋ’ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪವನ್ನು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆಗಳೊಂದಿಗೆ ಪ್ರಸ್ತಾಪಿಸಿದ ಬಳಿಕ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಚರ್ಚೆ ತೀವ್ರಗೊಂಡಿದೆ. ಅರ್ಹ ಮತದಾರರ ಹೆಸರುಗಳನ್ನು ಕೈಬಿಡುವುದು ಹಾಗೂ ಕೆಲವರ ಹೆಸರುಗಳನ್ನು ಸೇರ್ಪಡೆಗೊಳಿಸುವಂತಹ ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಯಾವುದೇ ಮತದಾರನ ಹಕ್ಕು ಕಸಿದುಕೊಳ್ಳುವಂತಾಗಬಾರದು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಆ ಹೋರಾಟದ ಫಲವಾಗಿ ದೊರೆತ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಬಡತನ ನಿರ್ಮೂಲನೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆ ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶಗಳಾಗಿವೆ. 1885ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿರಂತರವಾಗಿ ಹೋರಾಡುತ್ತಿದೆ.
ಜನರ ತೀರ್ಪಿಗೆ ಗೌರವ ದೊರೆಯುವುದರ ಜತೆಗೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗುವಂತೆ ಪ್ರೋತ್ಸಾಹಿಸಬೇಕು. ಮತದಾನ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಸಾಧ್ಯ ಎಂದು ಹೇಳಿದರು.ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಮಾತನಾಡಿ, ಮತದಾರರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಆಂದೋಲನವನ್ನು ಕೇವಲ ಪಕ್ಷದ ಪ್ರತಿಭಟನೆಯಾಗಿ ನೋಡಬಾರದು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಪ್ರಭಾವ ಹೆಚ್ಚಾಗಿದೆ. ಈ ಮೂಲಕ ತಮಗೆ ಅನುಕೂಲವಾಗುವ ವ್ಯಕ್ತಿಯನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದರಿಂದ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅದರ ನಿರ್ಧಾರಗಳ ಕುರಿತು ಅನುಮಾನಗಳು ಮೂಡಿವೆ ಎಂದು ಆರೋಪಿಸಿದರು.
ಬಿಜೆಪಿಯನ್ನು ಬೆಂಬಲಿಸದ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪವನ್ನೂ ಅವರು ಮಾಡಿದರು. ಇದಕ್ಕಾಗಿ ಫಾರಂ ನಂ. 7 ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾರರು ಮೃತಪಟ್ಟಿದ್ದಾರೆ, ಸ್ಥಳದಲ್ಲಿ ವಾಸವಿಲ್ಲ ಅಥವಾ ದೇಶ ತೊರೆದಿದ್ದಾರೆ ಎಂಬ ಕಾರಣಗಳನ್ನು ನೀಡಿ ಹೆಸರುಗಳನ್ನು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಇಂತಹ ಅರ್ಜಿಗಳು ಬಿಜೆಪಿ ಕಾರ್ಯಕರ್ತರ ಕೈಗೆ ಹೇಗೆ ತಲುಪುತ್ತಿವೆ ಎಂಬುದರ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸ್ವತಂತ್ರವಾಗಿ ನಡೆಯುತ್ತಿಲ್ಲ; ಇದರ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆ ಎಂದು ಜಿ.ಟಿ. ನಾಯ್ಕ ದೂರಿದರು. ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದರೂ ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವ ಬದಲು ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಮತದಾರರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಸಿ.ಎಫ್. ನಾಯ್ಕ, ದೀಪಕ ದೊಡ್ಡೂರು, ಗಣೇಶ ದಾವಣಗೆರೆ, ಪ್ರಸನ್ನ ಶೆಟ್ಟಿ, ಪ್ರಸನ್ನ ನಾಯ್ಕ, ಜ್ಯೋತಿ ಪಾಟೀಲ, ಶ್ರೀಲತಾ ಕಾಳೇರಮನೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.