ಗೋಕಾಕ್

ಆಟದ ಮೈದಾನದಲ್ಲಿ ಕುಡುಕರ ಕಾಟ: ಕ್ರಮಕ್ಕೆ ಆಗ್ರಹ

ಆಟದ ಮೈದಾನದಲ್ಲಿ ಕುಡುಕರ ಕಾಟ: ಕ್ರಮಕ್ಕೆ ಆಗ್ರಹ

ಘಟಪ್ರಭಾ: ಆಟದ ಮೈದಾನ ಗ್ರಾಮದ ಕ್ರೀಡಾ ಪಟುಗಳು ಉಪಯೋಗಿಸುವುದನ್ನು ಬಿಟ್ಟು, ಕುಡುಕರು ಉಪಯೋಗಿಸಿ ಮೈದಾನ ತುಂಬೆಲ್ಲಾ ಸಾರಾಯಿ, ಬೀಯರ್ ಬಾಟಲಿಗಳನ್ನು ಎಸೆಯುತ್ತಿರುವ ಘಟನೆ ಸಮೀಪದ ಧುಪದಾಳ ಗ್ರಾಮದ ಎರಡು ಮೈದಾನಗಳಲ್ಲಿ ಮೇಲಿಂದ ಮೇಲೆ ಜರುಗುತ್ತಿದೆ.

ಧುಪದಾಳ ಮುಖ್ಯ ರಸ್ತೆಯ ಪಕ್ಕದಲ್ಲಿ ಮೆಥೋಡಿಸ್ಟ್ ಚರ್ಚ ಹಾಗೂ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಖುಲ್ಲಾ ಜಾಗವಿದ್ದು, ಈ ಎರಡೂ ಜಾಗಗಳನ್ನು ಇಲ್ಲಿಯ ಜನರು ಹತ್ತಾರು ವರ್ಷಗಳಿಂದ ಆಟದ ಮೈದಾನದ ರೂಪದಲ್ಲಿ ಉಪಯೋಸುತ್ತ ಬಂದಿದ್ದಾರೆ. 

ಆದರೆ ಇತ್ತೀಚಿನ ದಿನಗಳಲ್ಲಿ ಈ ಆಟದ ಮೈದಾನದಲ್ಲಿ ಕುಡುಕರ ಕಾಟ ಹೆಚ್ಚಾಗಿದ್ದು, ಪ್ರತಿ ದಿನ ರಾತ್ರಿ ಇಲ್ಲಿಗೆ ಬರುವ ಮದ್ಯ ಪ್ರೀಯರು ತಮ್ಮ ಕೈಯಲ್ಲಿ ಹಿಡಿದುಕೊಂಡು ಬರುವ ಸರಾಯಿ ಮತ್ತು ಬಿಯರ್ ಬಾಟಲಿಗಳನ್ನು ಅಲ್ಲೆಯೇ ಎಸೆದು ಹೋದರೆ ಕೆಲವು ಕಿಡಗೇಡಿಗಳು ತಾವು ತಂದಿರುವ ಗಾಜಿನ ಬಾಟಲಿಗಳನ್ನು ಒಡೆದು ಚೂರು ಚೂರು ಮಾಡಿ ಮೈದಾನದಲ್ಲಿ ಎಸೆದು ಹೋಗುತ್ತಿದ್ದಾರೆ. 

ಇದರಿಂದ ಈ ಮೈದಾನದಲ್ಲಿ ಆಟಕ್ಕೆ ಹಾಗೂ ವಾಯು ವಿಹಾರಕ್ಕೆ ಬರುವ ಜನರಿಗೆ ತೀರಾ ತೊಂದರೆಯಾಗುತ್ತಿದ್ದು, ಇದರಿಂದ ಅನೇಕ ಕ್ರೀಡಾ ಪಟುಗಳು ಗಾಯಗೊಂಡಿದ್ದಾರೆ. ಇಲ್ಲಿ ಯುವಕರು ನಿತ್ಯ ಕ್ರೀಕೆಟ್ ಆಟವಾಡುತ್ತಾರೆ. ಅವರು ಆಟಕ್ಕಿಂತ ಹೆಚ್ಚು ಮೈದಾನ ತುಂಬೆಲ್ಲ ಬಿದ್ದಿರುವ ಗಾಜಿನ ಚೂರುಗಳ ಆಯ್ದು ಸ್ವಚ್ಚಗೊಳಿಸುವುದು ಕಾಯಕವಾಗಿದೆ.

ಈ ಬಗ್ಗೆ ಕಾಳಜಿ ಹೊಂದಿರುವ ಗ್ರಾಮದ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಜಿಲ್ಲಾ ರೈತ ಘಟಕದ ವತಿಯಿಂದ ಧುಪದಾಳ ಗ್ರಾಮದಲ್ಲಿ ಎರಡು ಮೈದಾನಗಳನ್ನು ಸ್ವಚ್ಚಗೊಳಿಸುತ್ತಿದ್ದು, ಈ ಯುವಕರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.  

ಈ ಬಗ್ಗೆ ಸ್ಥಳೀಯ ಪೊಲೀಸ ಇಲಾಖೆಯವರು ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ಮೈದಾನವನ್ನು ಮಲೀನಗೊಳಿಸುತ್ತಿರುವ ಕುಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಘಟಪ್ರಭಾ ಪುರಸಭೆ ಅಧಿಕಾರಿಗಳು ಕೂಡಾ ಗ್ರಾಮೀಣ ಕ್ರೀಡಾ ಪಟುಗಳ ಹಿತದೃಷ್ಟಿಯಿಂದ ಮೇಲಿಂದ ಮೇಲೆ ಮೈದಾನ ಸ್ವಚ್ಛಗೊಳಿಸುವ ಅವಶ್ಯಕತೆ ಇದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.

***ಧುಪದಾಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎರಡೂ ಆಟದ ಮೈದಾನಗಳಲ್ಲಿ ರಾತ್ರಿ ಹೊತ್ತು ಕುಡುಕರು ಸರಾಯಿ ಕುಡಿದು ಬಾಟ್ಲಿಗಳನ್ನು, ಗ್ಲಾಸುಗಳನ್ನು ಎಸೆಯುತ್ತಿದ್ದಾರೆ. ಕುಡುಕರ ಹಾವಳಿಯಿಂದ ಬೇಸತ್ತ ನಮ್ಮ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಪಧಾದಿಕಾರಿಗಳಿಂದ ಅನೇಕ ಬಾರಿ ಆಟದ ಮೈದಾನ ಸ್ವಚ್ಚಗೊಳಿಸಲಾಗಿದ್ದು, ಸಂಬಂದಿಸಿದ ಇಲಾಖೆಗಳು ಇಲ್ಲಿ ನಡೆಯುತ್ತಿರುವ ಅಕ್ರಮ ಚವಟಿಕೆಗಳನ್ನು ತೆಡೆಯಲು ಮುಂದಾಗಬೇಕು. 

      -ಮಾನಿಂಗ ಕರಿಗಾರ, ಅಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಜಿಲ್ಲಾ ರೈತ ಘಟಕದ 

ಸುದ್ದಿ ಓದಿ