ಕಾಯಕ ಶರಣರ ಜಯಂತಿ ಆಚರಣೆ
ಬ್ಯಾಡಗಿ12: ವಚನಗಳು ಹಾಗೂ ಶರಣರನ್ನು ಸ್ಮರಿಸುವ ಜೊತೆಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.ಪಟ್ಟಣದ ತಾಲೂಕ ಕಚೇರಿಯ ಸಭಾಭವನದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಿದ್ದ ‘ಕಾಯಕ ಶರಣರ ಜಯಂತಿ’ ಆಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ವೃತ್ತಿಯನ್ನು ಗೌರವದಿಂದ ನಡೆಸಿ, ಮಹನೀಯರಾದ ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ‘ವಚನ’ ಎಂದರೆ ಮಾತು. ಇದಕ್ಕೆ ಕಾವ್ಯ, ಮಹಾಕಾವ್ಯ, ಪುರಾಣ ಇಂತಹ ಹೆಸರು ಬಂದಿಲ್ಲ.
ಏಕೆಂದರೆ ಶರಣರ ನಡೆ, ನುಡಿ, ಆಚಾರ, ವಿಚಾರ, ಕಾಯಕ ಒಂದೇ ಆಗಿದ್ದು, ವಚನಗಳು ಬದುಕಿನ ಶ್ರೇಷ್ಠ ಮಾನವೀಯ ಮೌಲ್ಯಗಳು ಹಾಗೂ ಸಹೋದರತೆ, ಸಮಾನತೆ ಸಾರುವ ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಪದಗಳಾಗಿವೆ. ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ತಿಳಿಸಿದರು. ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಟಿ.ಲಮಾಣಿ, ಪುರಸಭಾ ಸದಸ್ಯ ಶಿವರಾಜ ಅಂಗಡಿ, ಮುಖಂಡ ಸೋಮಣ್ಣ ಮಾಳಗಿ, ಮೋಹನದಾಸ್, ಗ್ರಾಮ ಲೆಕ್ಕಾಧಿಕಾರಿ ಗುಂಡಪ್ಪ ಹುಬ್ಬಳ್ಳಿ, ಬಿ.ಎನ್. ಖವಾಸ್, ರಂಗಪ್ಪಗೌಡ್ರ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಇನ್ನೀತರರು ಹಾಜರಿದ್ದರು.