ಜಂಗಮ ಕ್ಷೇತ್ರ ಗುರು ಮೂಕಪ್ಪ ಶಿವಯೋಗಿಗಳ ಮಠಕ್ಕೆ ನೂತನ ಮಠಾಧೀಶರಿಗೆ ಪಟ್ಟಾಧಿಕಾರ ಮಹೋತ್ಸವ
ರಾಣೇಬೆನ್ನೂರು 27: ಅಖಂಡ ಧಾರವಾಡ ಜಿಲ್ಲೆಯಲ್ಲೇ ಜಂಗಮ ಕ್ಷೇತ್ರವೆಂದು ಹೆಸರಾಗಿರುವ ಹಿರೇಕೆರೂರು ತಾ.ನ ಸುಕ್ಷೇತ್ರ ತಿಪ್ಪಾಯಿಕೊಪ್ಪ ಗ್ರಾಮದ ಗುರು ಮೂಕಪ್ಪ ಶಿವಯೋಗಿಗಳ ಮಠಕ್ಕೆ ನೂತನ ಮಠಾಧೀಶರಾಗಿ ನಿಯೋಜಿತಗೊಂಡಿದ್ದ ಪೂಜ್ಯ ಶ್ರೀ ಮಂಹಂತ ದೇವರಿಗೆ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವು ಅದ್ದೂರಿಯಿಂದ ಹಾಗೂ ಸಮಸ್ತ ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿಸಲಾಯಿತು. ನೂತನ ಶ್ರೀಗಳಿಗೆ ಷಟಸ್ಥಲ ಬ್ರಹ್ಮೋಪದೇಶ ಹಾಗೂ ಚಿನ್ಮಯಾನುಗ್ರಹವನ್ನು ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಆನಂದಪುರ ಇವರು ನೆರವೇರಿಸಿ ಪೂಜ್ಯ ಮಹಾಂತ ಸ್ವಾಮಿಗಳು ಎಂಬ ನಾಮಕರಣವನ್ನು ಮಾಡಿದರು. ಮೂಕಪ್ಪ ಸ್ವಾಮಿಗಳ ಮಠದ ಹಿರಿಯ ಶ್ರೀಗಳಾದ ವಿರುಪಾಕ್ಷ ಮಹಾಸ್ವಾಮಿಗ¼ ಪೀಠಾರೋಹಣದ ಸಮಾಜ ಸೇವಾ ಧೀಕ್ಷೆ ನೀಡಿದರು. ಈ ಒಂದು ಅವಿಸ್ಮರಣೀಯ ಸನ್ನಿವೇಶಕ್ಕೆ ಪರಮಪೂಜ್ಯರು ಗಳಾದ ಪ್ರ.ಸದಾಶಿವ ಸ್ವಾಮಿಗಳು ಹಾವೇರಿ, ಸಿದ್ಧವೀರ ಸ್ವಾಮಿಗಳು ತಾಳಗುಪ್ಪ, ಶಿವಬಸವ ಸ್ವಾಮಿಗಳು ಅಕ್ಕಿಆಲೂರು, ಶಿವಯೋಗಿ ಸ್ವಾಮಿಗಳು ಗುಡ್ಡದಾನ್ವೇರಿ, ಅಮರಸಿದ್ದೇಶ್ವರ ಸ್ವಾಮಿಗಳು ಕುಂದರಗಿ, ಚನ್ನಬಸವ ಸ್ವಾಮಿಗಳು ಹುಲಗೂರು, ಗುರುಮಹೇಶ್ವರ ಶಿವಾಚಾರ್ಯರು ಕೂಡಲ, ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಮುಂತಾದ ಶ್ರೀಗಳು ಸಾಕ್ಷಿ ಭೂತರಾದರು.
ಸದಾಶಿವ ಸ್ವಾಮಿಗಳು ಹಾವೇರಿ ಇವರು ಆಶೀರ್ವಚನ ನೀಡಿ ದಿ. 1ರಿಂದ ಪ್ರಾರಂಭಗೊಂಡ ಪಟ್ಟಾಧಿಕಾರ ಮಹೋತ್ಸವದ ಕಾರ್ಯಕ್ರಮಗಳು 25 ದಿನಗಳ ಕಾಲ ಸತತವಾಗಿ ನಡೆದು ಪ್ರತಿನಿತ್ಯ ಪ್ರವಚನ, ಪ್ರಸಾದ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಪರಮ ಪೂಜ್ಯರಾದ ಶ್ರೀಶೈಲ ಜಗದ್ಗುರುಗಳು, ಸುತ್ತೂರ ಜಗದ್ಗುರುಗಳು, ಸಾಣೇಹಳ್ಳಿಯ ಪಂಡಿತಾರಾಧ್ಯರು ಮುಂತಾದವರು ಆಗಮಿಸಿ ಹರಸಿ ಹೋಗಿದ್ದಾರೆ. ಯಾವ ತೊಂದರೆಯೂ ಇಲ್ಲದೆ ನಿರ್ವಿಜ್ಞವಾಗಿ ನಡೆದ ಪಟ್ಟಾಧಿಕಾರ ಮಹೋತ್ಸವವು ಯಶಸ್ವಿಯಾಗಲು ತಿಪ್ಪಾಯಿಕೊಪ್ಪ, ಮಾಸೂರು ಸೇರಿದಂತೆ ಸುತ್ತಮುತ್ತಲ ನಾಡಿನ ಸದ್ಭಕ್ತರ ಸಹಕಾರವೇ ಕಾರಣವೆಂದು ಹೇಳಿ ಸ್ವಾಮಿಗಳ ಹಾಗೂ ಸಮಾಜದ ಬಾಂದವ್ಯ ಹಾಲು-ನೀರು ಇದ್ದಂತೆ ಇರಬೇಕು. ಬೆಳೆಯ ರಕ್ಷಣೆಗೆ ಬೇಲಿ ಹಾಕಿದಂತೆ ನೂತನ ಮಹಂತ ಸ್ವಾಮಿಗಳಿಗೆ ಭಕ್ತರು ಬೇಲಿಯಾಗಿ ರಕ್ಷಿಸಬೇಕು. ಸ್ವಾಮಿಗಳ ಸ್ಥಾನ ಸುಪ್ಪತ್ತಿಗೆ ಅಲ್ಲ, ಮುಳ್ಳಿನ ಹಾಸಿಗೆ ಹಾವು-ಚೇಳುಗಳ ಜೊತೆ ಕಾರ್ಯನಿರ್ವಹಿಸಬೇಕಾಗುತ್ತದೆ. ತಮ್ಮ ಪಾಂಡಿತ್ಯದಂದ ಮೂಕಪ್ಪ ಹಾಗೂ ವಿರುಪಾಕ್ಷ ಶ್ರೀಗಳ ಆಶೀರ್ವಾ ದದಿಂದ ಮಹಂತ ಸ್ವಾಮಿಗಳು ಉತ್ತಮ ಕಾರ್ಯ ನೆರವೇರಿಸಿ ಭಕ್ತರ ಮನಸ್ಸುಗಳನ್ನು ಕಟ್ಟಿ ಧರ್ಮ ಜಾಗೃತಿ ಕಾರ್ಯ ಮಾಡಬೇಕೆಂದು ಹೇಳಿ ಮಾಸೂರು-ತಿಪ್ಪಾಯಿಕೊಪ್ಪದ ಭಕ್ತರ ಉಡಿಗೆ ಮಹಂತ ಸ್ವಾಮಿಗಳನ್ನು ಹಾಕಿದ್ದೇವೆ, ಇವರನ್ನು ರಕ್ಷಿಸುವ ಜವಾಬ್ದಾರಿ ಭಕ್ತರದ್ದಾಗಿದೆ, ಗುರು-ಶಿಷ್ಯರ ಪರಂಪರೆ ಇಲ್ಲಿ ಬೆಳೆದಿದೆ, ಮಾತೃ ಹೃದಯದ ವಿರುಪಾಕ್ಷ ಸ್ವಾಮಿಗಳು ಗುಡಿ-ಗೋಪುರ ಕಟ್ಟಿದ್ದಾರೆ, ನೀವು ಬಂಗಾರದ ಕಳಸ ಇಡುವ ಕಾರ್ಯ ಮಾಡಿರೆಂದು ಹೇಳಿದರು.
ನಂತರ ಮಾಜಿ ಸಚಿವ ಶ್ರೀ ರುದ್ರಪ್ಪ ಲಮಾಣಿ ಮಾತನಾಡಿ ವಿರುಪಾಕ್ಷ ಶ್ರೀಗಳ ಶ್ರಮ ಅಪಾರವಾಗಿದ್ದು ಸದೃಢವಾದ ಮಠವನ್ನು ಕಟ್ಟಿದ್ದಾರೆ, ಭಕ್ತರ ಸಹಕಾರದಿಂದ ಈ ಸಾಧನೆಯಾಗಿದ್ದು ಇದನ್ನು ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ನೂತನ ಶ್ರೀಗಳು ಪ್ರಯತ್ನಿಸಬೇಕೆಂದು ಹೇಳಿದರು. ಕೃಷಿ ಸಚಿವ ಶ್ರೀ ಬಿ.ಸಿ.ಪಾಟೀಲ ಮಾತನಾಡಿ ಪಟ್ಟಾಧಿಕಾರ ಮಹೋತ್ಸವ ನೋಡುವ ಭಾಗ್ಯ ಲಭಿಸಿದ್ದು ನನ್ನ ಪುಣ್ಯ ಎಂದು ಹೇಳಿ ನಾನು ಹೆಸರಿಗೆ ಮಾತ್ರ ಸಮಿತಿಯ ಅಧ್ಯಕ್ಷನಾಗಿದ್ದೇನೆ, ಈ ಸಮಾರಂಭದ ಯಶಸ್ಸು ಸದಾಶಿವ ಶ್ರೀಗಳಿಗೆ ಭಕ್ತ ಸಮೂಹಕ್ಕೆ ಸಲ್ಲಬೇಕು, ವಿರುಪಾಕ್ಷ ಶ್ರೀಗಳು ಧರ್ಮಸೌಧ ಕಟ್ಟಿದ್ದಾರೆ, ನೂತನ ಮಹಂತ ದೇವರು ಧರ್ಮ ಜಾಗೃತಿ ಮಾಡಬೇಕಾಗಿದೆ ಏಕೆಂದರೆ ಇಂದು ಜಾತಿ-ಜಾತಿಗಳ ನಡುವೆ ಕಿತ್ತಾಟ ನಡೆದಿದೆ, ಇವನಾರವ ಎಂಬುದು ಹೋಗಿ ಜಾತಿ ಪ್ರಾಧಾನ್ಯತೆ ಮೆರೆದಿದೆ, ಇದು ಎಲ್ಲಿಗೆ ಹೋಗುತ್ತೆ ಗೊತ್ತಿಲ್ಲ, ಹೀಗೇ ಮುಂದುವರೆದರೆ ಇದು ಜನಾಂಗ ದರ್ಶನಕ್ಕೆ ದಾರಿಯಾಗಿ ಮಾನವ ಕುಲಕ್ಕೆ ಅಪಾಯ ಬರುತ್ತದೆಂಬ ಭೀತಿ ನನ್ನಲ್ಲಿದೆ, ಈ ಕಂದಕ ನಿವಾರಿಸಲು ಧರ್ಮಗುರುಗಳು ಪ್ರಯತ್ನಿಸಬೇಕೆಂದು ಹೇಳಿ ಮಾತೆಯರು ಮಕ್ಕಳಿಗೆ ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದರೆ ಮಕ್ಕಳು ಸಂಸ್ಕಾರವಂತ ರಾಗುತ್ತಾರೆ, ಇಲ್ಲದಿದ್ದರೆ ಮಕ್ಕಳು ನಿಮ್ಮನ್ನು ವೃದ್ಧಾಶ್ರಮಕ್ಕೆ ಕಲಿಸುವಂತ ಭಾವನೆ ತಾಳುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 97% ಆಧಾರಲಿಂಕ್ ಮಾಡಿ ದೇಶದಲ್ಲೇ ರಾಜ್ಯವು ಪ್ರಥಮಸ್ಥಾನ ಗಳಿಸಿದೆ ಎಂದು ಹೇಳಿ ಇನ್ನೆರೆಡು ತಿಂಗಳಲ್ಲಿ ಐದು ನೀರಾವರಿ ಯೋಜನೆಗಳಿಂದ ತಾ.ನ 90 ಕೆರೆಗಳನ್ನು ತುಂಬಿಸುವ ಸರ್ವಜ್ಞ ನೀರಾವರಿ ಯೋಜನೆ ಸಾಕಾರಗೊಳ್ಳಿದೆಂದು ಹೇಳಿದರು. ಮಾಜಿ ಸಂಸದ ಎಂ.ಸಿ.ಕುನ್ನೂರು ಮಾತನಾಡಿ ವಿರುಪಾಕ್ಷ ಶ್ರೀಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಪೂಜ್ಯಶ್ರೀ ವಿರುಪಾಕ್ಷ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಏನು ಇಲ್ಲದ ಮೂಕಪ್ಪ ಸ್ವಾಮಿಗಳ ಮಠ ಮೂಕಪ್ಪ ಶ್ರೀಗಳ ಕತೃತ್ವ ಶಕ್ತಿ ನಾಡಿನ ಉದ್ದಗಲಕ್ಕೂ ಭಕ್ತ ಮಹಾಶಯರು ನೀಡಿದ ಸಹಕಾರದ ಫಲವೇ ಮಠದ ಅಭಿವೃದ್ಧಿ ಎಂದು ಸದ್ಭಕ್ತರ ಸಹಕಾರವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ. ಅವರ ಸಹಕಾರವೇ ಮಠಾಭಿವೃದ್ಧಿಗೆ ಪ್ರೇರಣೆ ನೀಡಿದೆ ಎಂದು ಹೇಳಿ 25 ದಿನಗಳ ಕಾಲ ಪಟ್ಟಾಧಿಕಾರ ಮಹೋತ್ಸವದ ಯಶಸ್ಸಿಗೆ ರಾಘವೇಂದ್ರ ಯಡಿಯೂರಪ್ಪ, ಬಿ.ಸಿ.ಪಾಟೀಲ, ಯು.ಬಿ.ಬಣಕಾರ, ಎಸ್.ಎಸ್.ಪಾಟೀಲ, ಬಿ.ಎಚ್. ಬನ್ನಿಕೋಡ, ಆರ್.ಎಂ.ಲಮಾಣಿ, ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿಯವರ ಹಾಗೂ ಪೂಜ್ಯರುಗಳಾದ ಸದಾಶಿವ ಶ್ರೀಗಳು, ಕೂಡಲ, ಅಕ್ಕಿಆಲೂರು, ಗುಡ್ಡದಾನ್ವೇರಿ, ತಾಳಗುಪ್ಪ, ಕುಂದರಗಿ ಪೂಜ್ಯರ ಸಹಕಾರವನ್ನು ಸ್ಮರಿಸಿ ಈ ಎಲ್ಲ ಕಾರ್ಯದಲ್ಲಿ ಸಹಕರಿಸಿದವರಿಗೆ ಪೂಜ್ಯ ಮೂಕಪ್ಪ ಶ್ರೀಗಳ ಕೃಪಾಶೀರ್ವಾದ ಎಂದೆಂದಿಗೂ ಇರಲಿ ಎಂದು ಹೇಳಿ ಆಶೀರ್ವದಿಸಿದರು.
ನೂತನ ಮಹಂತ ಶ್ರೀಗಳು ಪ್ರಥಮ ಆಶೀರ್ವಚನ ನೀಡಿ ಪಟ್ಟಾಧಿಕಾರ ಮಹೋತ್ಸವವು 25 ದಿನಗಳ ಕಾಲ ನಡೆದು ಇಂದು ಸಂಪನ್ನಗೊಳ್ಳುತ್ತಿದ್ದು ಅಕ್ಕಮಹಾದೇವಿ ಹೇಳಿದಂತೆ `ನರಜನ್ಮವ ತೊರೆದು’ ಎಂಬ ವಚನ ಹೇಳಿ ಚಿಕ್ಕಮರಳಹಳ್ಳಿ ಗ್ರಾಮದಿಂದ ನನ್ನನ್ನು ತಂದು ತಮ್ಮ ಸಮಾನವಾದ ಸ್ಥಾನ-ಮಾನ, ಸಂಸ್ಕಾರ ನೀಡಿ `ಭುವಿಯಾಗಿದ್ದ ನನ್ನನ್ನು ಭಕ್ತನನ್ನಾಗಿ, ನರನಾಗಿದ್ದ ನನ್ನನ್ನು ಹರನನ್ನಾಗಿ’ ಮಾಡಿದವರು ವಿರುಪಾಕ್ಷ ಮಹಾಸ್ವಾಮಿಗಳು. ಇಂದು ಅಲಂಕರಿಸಿದ ಸಿಂಹಾಸನವನ್ನು ನಾನು ಸಿಂಹಾಸನವೆಂದು ತಿಳಿಯದೇ ಸೇವಾ ಪೀಠವೆಂದು ಭಾವಿಸುತ್ತೇನೆ. ಮಠಾಧಿಪತಿಯಾಗಿ ಮೆರೆಯದೇ ನಾಡಿನ ಸದ್ಭಕ್ತರ ಸೇವೆಗೆ ದೊರೆತ ಅವಕಾಶವೆಂದು ಭಾವಿಸುತ್ತೇನೆ. ಈ ವೈಭವ ನನಗೆ ಮುಖ್ಯವಲ್ಲ ಮೂಕಪ್ಪ ವಿರುಪಾಕ್ಷ ಶ್ರೀಗಳ ಭಕ್ತ ವೃಂದದವರ ಸೇವೆ ಮುಖ್ಯ. ನನ್ನ ಜೀವ ಇರುವವರೆಗೂ ನಾನು ಸೇವೆ ಮಾಡುತ್ತೇನೆ. ಇಹಲೋಕವನ್ನು ತ್ಯಜಿಸಿ ದಾಗಲೂ ಕೂಡ ನನ್ನ ಈ ದೇಹ ವಿದ್ಯಾರ್ಥಿಗಳ ಸಂಶೋಧನೆಗೆ ಅನುಕೂಲವಾಗುವ ದೃಷ್ಠಿಯಿಂದ ದೇಹದಾನ ಮಾಡುವುದಾಗಿ ಹೇಳಿದರು.
ತಿಪ್ಪಾಯಿಕೊಪ್ಪ, ಮಾಸೂರು ಹಾಗೂ ನಾಡಿನ ಸಮಸ್ತ ಭಕ್ತರ ಹೃದಯ ವೈಶಾಲ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾಯಿ ಹೃದಯದ ಸದಾಶಿವ ಶ್ರೀಗಳ ಕೂಡಲ ಮುಂತಾದ ಪೂಜ್ಯರ ಸೇವೆಯನ್ನು ಸ್ಮರಿಸಿ ಬಿ.ಸಿ.ಪಾಟೀಲ, ಯು.ಬಿ.ಬಣಕಾರ, ಎಸ್.ಎಸ್.ಪಾಟೀಲ, ಆರ್.ಎಂ. ಲಮಾಣಿ, ಎಂ.ಸಿ.ಕುನ್ನೂರು, ಬಿ.ಎಚ್.ಬನ್ನಿಕೋಡ, ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿಯವರ ಹಾಗೂ ಪ್ರತ್ಯಕ್ಷ-ಅಪ್ರತ್ಯಕ್ಷವಾಗಿ ಸಹಕಾರ ನೀಡಿದ ಸದ್ಭಕ್ತರನ್ನು ಕಂಡು ನನ್ನ ಮನಸ್ಸು ತುಂಬಿದೆ, ಮಾತುಗಳು ಬರುತ್ತಿಲ್ಲ, ನಿಮ್ಮೆಲ್ಲರ ಸೇವೆ ಮೂಕಪ್ಪ ಶ್ರೀಗಳ ಪಾದಕ್ಕೆ ಅರ್ಪಿತವಾಗಿದೆ ಎಂದು ಹೇಳಿ ತಿಂಗಳಲ್ಲಿ 2 ಹಳ್ಳಿಗೆ ಭೇಟಿನೀಡಿ ಯಾವುದೇ ಜಾತಿ ನೋಡದೆ ಎಲ್ಲ ಭಕ್ತರ ಮನೆ-ಮನ ತಲುಪಿ ಸಮಾಜ ಜಾಗೃತಿ ಧರ್ಮಜಾಗೃತಿ ಕಾರ್ಯ ಮಾಡುವುದಾಗಿ ನನ್ನ ಇಡಿ ಜೀವನ ನಿಮ್ಮೆಲ್ಲರ ಶ್ರೇಯಸ್ಸಿಗೆ ಮೀಸಲು ಜಾತಿ, ಮತ, ಪಂಥ ಹೊರತುಪಡಿಸಿ ಶ್ರೀಮಠವನ್ನು ಕಟ್ಟಿ ಬೆಳೆಸಲು ಸರ್ವರೂ ಕೈ ಜೋಡಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣವೆಂದು ಹೇಳಿದರು.