ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು
ಕಾರವಾರ 06: ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ನ್ಯಾಯಯುತವಾಗಿ ಹಾಗೂ ಪಾರದರ್ಶಕವಾಗಿ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ದೂರಿನ ಬಗ್ಗೆ ಮಾಹಿತಿ ನೀಡಿದರು. ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಇತ್ತೀಚಿಗೆ ನೀಡಿದ್ದ ಹೇಳಿಕೆ ಹಾಗೂ ಕಾರವಾರ, ಅಂಕೋಲಾದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿದ್ಯಾಮಾನಗಳ ಆಧಾರದ ಮೇಲೆ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ದೂರು ನೀಡುದ್ದಾಗಿ ಅವರು ಹೇಳಿದರು. ಮಾಜಿ ಸಚಿವ ಆಸ್ನೋಟಿಕರ್ ಇತ್ತೀಚಿಗೆ ಅಧಿಕಾರದಲ್ಲಿರುವ ಜನಪ್ರತಿನಿಧಿಯ ಪಸಂರ್ಟೇಜ್ ಒತ್ತಡಕ್ಕೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಗಂಭೀರ ಆರೋಪ ಮಾಡಿದವರು ಯಾವುದೇ ಬೀದಿಯಲ್ಲಿ ಹೋಗುವ ಸಾಮಾನ್ಯ ವ್ಯಕ್ತಿಯಲ್ಲ. ಎರಡು ಬಾರಿ ಶಾಸಕರಾಗಿ, ಸಚಿವ ಸಂಪುಟ ದರ್ಜೆಯ ಸಚಿವರಾಗಿದ್ದವರು ನೀಡಿರುವ ಈ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹಾಗೇ ಬಿಡಲೂ ಆಗುವುದಿಲ್ಲ. ಪರ್ಸೇಂಟೇಜ್ ವಿಷಯಕ್ಕೆ ಹೊಸ ಆಸ್ಪತ್ರೆ ನಿರ್ಮಾಣದ ಕಾಮಗಾರಿ ನಿಂತಿದೆ ಎಂದು ಹೇಳಿದ್ದ ನೀಡಿದ್ದಾರೆಂದರೆ ಇದರಲ್ಲಿ ಒಂದು ಅರ್ಥ ಇದೆ ಅನಿಸಿತು ಎಂದರು.
ಕಾರವಾರದ ಜಿಲ್ಲಾ ಆಸ್ಪತ್ರೆಯ 150 ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ಮಾಡಿಲ್ಲವೆಂದು ಆನಂದ್ ಅಸ್ನೋಟಿಕರ್ ಸ್ಥಳೀಯ ರಾಜಕಾರಣಿಯೊಬ್ಬರ ಮೇಲೆ ಆರೋಪಿಸಿ ಈ ಹೇಳಿಕೆ ನೀಡಿದ್ದಾರೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಆ ರಾಜಕಾರಣಿ ಯಾರೆಂದು ಲೆಕ್ಕ ಹಾಕಿದೆ. ದೊಡ್ಡ ದೊಡ್ಡ ಕಾಮಗಾರಿಗಳನ್ನು ನಿಯಂತ್ರಣ ಮಾಡುವ ಶಕ್ತಿ, ಸಾಮರ್ಥ್ಯ ಯಾವುದೇ ಗ್ರಾಮ ಪಂಚಾಯತಿ ಸದಸ್ಯ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ನಗರಸಭೆಯ ಸದಸ್ಯನಿಗೆ ಇರುವುದಿಲ್ಲ. ಕಾರವಾರ ತಾಲೂಕು ಮಟ್ಟಿಗೆ ವಿಚಾರ ಮಾಡಬೇಕೆಂದರೆ, ಎಲ್ಲಾ ದೃಷ್ಟಿಯಿಂದಲೂ ಹಾಗೂ ಮೊದಲಿಂದಲೂ ಆರೋಪ ಕೇಳಿಬರುತ್ತಿರುವುದನ್ನು ನೋಡಿದರೆ ಆನಂದ ಅವರ ಆರೋಪ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬೊಟ್ಟು ಮಾಡಿ ತೋರಿಸುವಂತಿದೆ ಎಂದು ಗುತ್ತಿಗೆದಾರ ಮಾಧವ ದೂರಿದರು.
ಶಾಸಕಿ ರೂಪಾಲಿ ಈಗ ಸಾರ್ವಜನಿಕ ಸೇವಕರು. ಇವರ ಬಗ್ಗೆ ಇಂಥ ಗುರುತರ ಆರೋಪ ಇದೆ ಅಂದಮೇಲೆ, ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ, ಆನಂದ ಅವರ ಹೇಳಿಕೆ ಬಂದ ನಂತರ ಯಡಿಯೂರ್ಪನವರು ಬಂದು ಭೂಮಿಪೂಜೆ ಮಾಡುತ್ತಾರೆ ಎಂಬ ಹೇಳಿಕೆಗಳು ಬಂದಿರುವುದನ್ನೆಲ್ಲ ನೋಡಿದರೆ, ಕೆಲವೆಡೆ ಕಾಮಗಾರಿ ಆರಂಭ ಆಗದೇ ಇರುವುದು, ಇನ್ನು ಕೆಲವೆಡೆ ಭೂಮಿಪೂಜೆ ಆಗದೇ ಇರುವುದನ್ನೆಲ್ಲ ನೋಡಿದರೆ ಹೇಳಿಕೆಗೆ ಪುಷ್ಠಿ ನೀಡುತ್ತದೆ. ಗುತ್ತಿಗೆದಾರನಿಗೆ ಕಾಮಗಾರಿ ಆಗುತ್ತದೆ, ಭೂಮಿಪೂಜೆ ಆಗುವ ಹೊರತು ಕಾಮಗಾರಿ ಪ್ರಾರಂಭ ಮಾಡಲು ಕೊಡುವುದಿಲ್ಲ. ಇದಕ್ಕೆ ಏನು ಕಾರಣ? ಭೂಮಿಪೂಜೆ ಮಾಡದೇ ಶಾಸಕರು ಯಾಕೆ ಅಡ್ಡಿಪಡಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಅಲ್ಲದೇ ಎಷ್ಟು ಕಾಮಗಾರಿಗಳಿಗೆ ಭೂಮಿಪೂಜೆ ಆಗಿಲ್ಲ ಎನ್ನುವ ಮಾಹಿತಿಯನ್ನು ತೆಗೆಯಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಮಾಧವ ನಾಯ್ಕ ಹೇಳಿದರು.
ಯಾರೇ ಆದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕೆನ್ನುವುದು ನನ್ನ ಆಸೆ. ಯಾವುದೇ ರೀತಿಯಲ್ಲಿ ಈ ಆರೋಪಿತ ರಾಜಕಾರಣಿ ಅಥವಾ ಶಾಸಕರ ಮೇಲೆ ವೈಯಕ್ತಿ ದ್ವೇಷ, ಅಸೂಯೆ ನನಗಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುತ್ತೇನೆ. ಈ ಮೊದಲಿನಿಂದಲೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಾಗಲೂ ಬಹಳಷ್ಟು ಜನರನ್ನು ಭ್ರಷ್ಟಾಚಾರ ನಿಗ್ರಹ ದಳದ ಮುಖಾಂತರ ಜೈಲಿಗಟ್ಟುವ ಕೆಲಸ ಮೊದಲಿನಿಂದಲೂ ಮಾಡುತ್ತಾ ಬಂದಿದ್ದೇನೆ. ಹೀಗಾಗಿ, ಈ ಎಲ್ಲಾ ರೋಪಗಳು ಶಾಸಕಿಗೇ ಬೊಟ್ಟು ಮಾಡಿ ತೋರಿಸುತ್ತಿರುವುದರಿಂದ ಎಸಿಬಿಗೆ ತನಿಖೆಗೆ ದೂರನ್ನು ನೀಡಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಆನಂದ ಅಸ್ನೋಟಿಕರ್ ಅವರನ್ನೇ ಉಲ್ಲೇಖಿಸಿದ್ದೇನೆ. ಭ್ರಷ್ಟಾಚಾರ ನಿಗ್ರಹ ದಳದವರು ತನಿಖೆ ಮಾಡಿ, ಸಾಕ್ಷಿ ಸಂಗ್ರಹಿಸಲಿ. ಅಲ್ಲದೇ ಆರೋಪಿತರನ್ನು ಬಂಧಿಸುವ ಕೆಲಸವಾಗಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಶಾಸಕಿಯ ಮೇಲಿನ ದೂರು ಆಗಿರುವುದರಿಂದ ಸಭಾಪತಿಗೂ ಸ್ಪೀಡ್ ಪೋಸ್ಟ್ ಮೂಲಕ ಪತ್ರ ಕಳುಹಿಸಿ ಗಮನಕ್ಕೆ ತಂದಿದ್ದು, ತನಿಖೆಗೆ ಆಗ್ರಹಿದ್ದೇನೆ ಎಂದರು.
ಇತ್ತೀಚಿಗೆ ಗ್ರಾಮ ಪಂಚಾಯತಿಯಿಂದ ವಿಧಾನಸೌಧದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ನಿಗ್ರಹಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳ ಕೂಡ ಕೆಲಸ ಮಾಡುತ್ತಿದ್ದರೂ ನಿಗ್ರಹ ಆಗುತ್ತಿಲ್ಲ. ಯಾಕೆಂದರೆ ನಾವು ಅನ್ಯಾಯವನ್ನು ಸಹಿಸಿಕೊಂಡು, ಭ್ರಷ್ಟಾಚಾರ ಕಣ್ಮುಂದೆ ನಡೆಯುತ್ತಿದ್ದರೂ ಸುಮ್ಮನಿರುತ್ತಿರುವುದೇ ಕಾರಣವಾಗಿದೆ. ಭ್ರಷ್ಟಾಚಾರ ಮಾಡುವವನಿಗಿಂತಲೂ ನೋಡಿ ಸುಮ್ಮನಾಗುವುದು ಬಹುದೊಡ್ಡ ಅಪರಾಧ ಎಂದು ಮಾಧವ ಹೇಳಿದರು.