ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ: ಶಾಸಕ ಬಳ್ಳಾರಿ
ಬ್ಯಾಡಗಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 118 ಗ್ರಾಮಗಳಲ್ಲಿ ಜಲಜೀವನ ಯೋಜನೆಯಡಿ 170 ಕೋಟಿ ರೂಗಳ ಅನುದಾನದ ವೆಚ್ಚದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜೆಜೆಎಂ ಹಾಗೂ ಮನೆಮನೆಗೆ ಗಂಗೆ ಯೋಜನೆಯಡಿ 2.43ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನಗೊಳಿಸಿರುವ ಜೆಜೆಎಂ ಯೋಜನೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ 55ಲೀಟರ್ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸದುದ್ದೇಶವನ್ನು ಹೊಂದಲಾಗಿದ್ದು, ಕೇವಲ ಮೂರೂವರೆ ವರ್ಷದ ಅವಧಿಯಲ್ಲಿ ಹಾಲಿ ಬಿಜೆಪಿ ಸರ್ಕಾರ ಹಾವೇರಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ 1614ಕೋಟಿ ಅನುದಾನ ಒದಗಿಸಿದೆ ಎಂದು ತಿಳಿಸಿದರು.
ಇಂಜನೀಯರ್ ಕಾಶೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮದಲ್ಲಿ ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗುತ್ತೆಮ್ಮ ದುರುಗಮುರುಗಿ, ಉಪಾಧ್ಯಕ್ಷೆ ಪ್ರೇಮಾ ಪಾಟೀಲ, ಸದಸ್ಯರಾದ ಮುನಾಜಿಲ್ ಮತ್ತಿಹಳ್ಳಿ, ಇಸಾಕ್ ಹೊಮ್ಮರಡಿ, ಮುಖಂಡರಾದ ಸುರೇಶ ಯತ್ನಳ್ಳಿ, ಶಿವಾನಂದ ಕಡಗಿ, ಬಿ.ಬಿ.ಪಾಟೀಲ, ಉಮೇಶ ರಟ್ಟಿಹಳ್ಳಿ, ಅಲ್ಲಾಭಕ್ಷು ಬಳ್ಳಾರಿ, ನಾಗಣ್ಣ ಪೂಜಾರ, ಗುತ್ತಿಗೆದಾರ ಸುರೇಶ ಪೂಜಾರ, ರಾಮಣ್ಣ ಗಾಜೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.