ಯರಗಟ್ಟಿ

ಮೇಲ್ದರ್ಜೆಗೇರದ ಯರಗಟ್ಟಿ ಉಪ ಪೊಲೀಸ್ ಠಾಣೆ

ಮೇಲ್ದರ್ಜೆಗೇರದ ಯರಗಟ್ಟಿ ಉಪ ಪೊಲೀಸ್ ಠಾಣೆ

ವರದಿ: ಈರಣ್ಣಾ ಹುಲ್ಲೂರ  

ಯರಗಟ್ಟಿ 20:  ತಾಲೂಕು ಕೇಂದ್ರವಾಗಿ ಮೂರು ವರ್ಷಗಳು ಕಳೆದರೂ ಯರಗಟ್ಟಿ ಉಪ ಪೊಲೀಸ್ ಠಾಣೆಯು ಮೇಲ್ದರ್ಜೆಗೆ ಏರುವ ಕನಸು ಕನಸಾಗಿಯೇ ಉಳಿದಿದೆ. 

ಯರಗಟ್ಟಿ ಪಟ್ಟಣವು ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಕೈಗಾರಿಕಾ ಪ್ರದೇಶವಾಗಿದ್ದು, ಪಟ್ಟಣದ ವ್ಯಾಪ್ತಿಯ ವಾಸಿಸುವ ಜನರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳು ಯರಗಟ್ಟಿ ಠಾಣೆಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಪಟ್ಟಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯವಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

ಪಟ್ಟಣದ ಪೊಲೀಸ್ ಉಪ ಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿದೆ. ಇದರಿಂದ ಜನರಿಗೆ ಹಾಗೂ ಕಾರ್ಮಿಕರಿಗೆ, ರಕ್ಷಣೆ ಕೊಡಲು ಹಾಗೂ ಶನಿವಾರದ ಜಾನುವಾರು ಸಂತೆ ರಾಜ್ಯದಲ್ಲಿ ಎಲ್ಲಿಯೂ ಆಗದ ರೀತಿಯಲ್ಲಿ ಜರುಗುವುದರಿಂದ ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ.  

ಜನರು ಅಪರಾಧ ಪ್ರಕರಣ ಹಾಗೂ ಇತರೆ ವಿಚಾರವಾಗಿ ಹತ್ತರಿಂದ ಹದಿನೈದು ಕಿಲೋ ಮೀಟರ್ ದೂರದ ಮುರಗೋಡ ಠಾಣೆಗೆ ಹೋಗುವ ಪರಿಸ್ಥಿತಿಯಿದೆ. 

ಪಟ್ಟಣವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ದಿನ ನಿತ್ಯ ಹೆಚ್ಚಿನ ಅಪಘಾತ ಹಾಗೂ ಅಪರಾಧ ಕೃತ್ಯಗಳು ನಡೆಯುತ್ತಿವೆ. 

ಪ್ರತ್ಯೇಕ ಠಾಣೆ ಆರಂಭಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪೊಲೀಸ್ ಉಪ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಜಾಗದ ಅನುಕೂಲವಿದೆ, ಉಪ ಠಾಣೆ ಜಮೀನನ್ನು ಇದಕ್ಕೆ ಬಳಸಿಕೊಳ್ಳಬಹುದು. 

ಯರಗಟ್ಟಿ ಉಪಠಾಣೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ನಿರ್ಮಿಸುವ ಪ್ರಸ್ತಾವನೆ ಸರ್ಕಾರದಮಟ್ಟದಲ್ಲಿದೆ. ಆದರೆ ಆರ್ಥಿಕ ಮುಗ್ಗಟ್ಟು ಇನ್ನಿತರ ಕಾರಣಗಳಿಂದ ಅನುಷ್ಠಾನಗೊಂಡಿಲ್ಲ. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಈಗ ಯರಗಟ್ಟಿ ಉಪ ಠಾಣೆಗೆ ಪಿ.ಎಸ್‌.ಐ. ಹುದ್ದೆ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಠಾಣೆ ಕಾರ್ಯಾರಂಭ ಮಾಡಲಿದೆ. 

ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ಮತಕ್ಷೇತ್ರ 

ಜಿಲ್ಲೆಯಲ್ಲಿ ಹೊಸ ಠಾಣೆಗಳ ಸ್ಥಾಪನೆ ಮತ್ತು ಉಪ ಠಾಣೆಗಳ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  

ಆದರೆ ಅನುಮೋದನೆ ಸಿಕ್ಕಿಲ್ಲ. ಯರಗಟ್ಟಿ ಪೊಲೀಸ್ ಠಾಣೆಯ ಸ್ಥಾಪನೆ ಅನುಮೋದನೆ ಹಂತದಲ್ಲಿದೆ. 

ಡಾ. ಭೀಮಾಶಂಕರ ಗುಳೆದ ಎಸ್‌.ಪಿ. ಬೆಳಗಾವಿ 

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಟ್ರಾಫಿಕ್ ಶನಿವಾರ ಬಂದರೆ ಪೊಲೀಸ್ ಇಲಾಖೆಗೆ ತೆಲೇಬಿಸಿಯಾದ ಟ್ರಾಫಿಕ್ ಸಮಸ್ಯೆ ಸಾರ್ವಜನಿಕರು ಕಂಗಾಲು ಈಗಲಾದರೂ ಎಚ್ಚೆತ್ತು ಸರ್ಕಾರ ಯರಗಟ್ಟಿಗೆ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಇಲ್ಲದಿದ್ದರೆ  ಹೋರಾಟ ಮಾಡಲಾಗುವುದು. 

ರಫೀಕ್ ಡಿ. ಕೆ, ಕರವೇ ಅಧ್ಯಕ್ಷ 


ಸುದ್ದಿ ಓದಿ