ಸಾಮರಸ್ಯಕ್ಕೆ ಹೆಸರಾದ ಯರಗಟ್ಟಿ ಮೊಹರಂ : ಡೋಲಿಗಳ ಪ್ರತಿಷ್ಠಾಪನೆ
ಈರಣ್ಣಾ ಹುಲ್ಲೂರ
ಯರಗಟ್ಟಿ 27: ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಹೆಸರಾದ ಯರಗಟ್ಟಿ ಪಟ್ಟಣದಲ್ಲಿ “ಮೊಹರಂ” ಹಬ್ಬವನ್ನು ಸರ್ವಧರ್ಮೀಯರು ಸೇರಿಕೊಂಡು ಭಾವೈಕ್ಯದಿಂದ ಆಚರಿಸುತ್ತಾರೆ. ಈ ವರ್ಷ ವರುಣನ ಆರ್ಭಟದ ಮಧ್ಯೆಯೂ ಶ್ರದ್ಧೆಯಿಂದ ಹಬ್ಬದ ಆಚರಣೆ ನಡೆದಿದೆ.
ಸಂಪ್ರದಾಯದಂತೆ ಆಯ್ಕೆ ಸ್ಥಳಗಳಲ್ಲಿ ಪಂಚಾಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿವಿಧ ಸಮುದಾಯಗಳ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಭಕ್ತರು.
ಯರಗಟ್ಟಿಯ ಬಾರ್ಕಿ ಓಣಿ ಹಿರೇಮಸೀದಿಯಲ್ಲಿ ಬಿಬಿ ಫಾತಿಮಾ ಡೋಲಿ, ಕರಿಗೋಣ್ಣವರ ಓಣಿಯ ಹುಲಿಕಟ್ಟೆಪ್ಪ ಡೋಲಿ, ಒಂಟಿ ಗಲ್ಲಿಯಲ್ಲಿ ಆಲಕಟ್ಟೇಪ್ಪ, ಫಕ್ಕೀರಸ್ವಾಮಿ ಡೋಲಿ, ನಾವಿ ಓಣಿ ಭಾರೇಮಾಮಾನ ಡೋಲಿ ಪ್ರತಿಷ್ಠಾಪಿಸಲಾಗಿದೆ.
5 ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಡೋಲಿಗಳನ್ನು ಬಣ್ಣದ ಕಾಗದಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮೊಹರಂ ಕಡೇ ದಿನವಾದ ಜುಲೈ 29ರಂದು ಎಲ್ಲ ಡೋಲಿಗಳು ಒಂದೆಡೆ ಭಕ್ತರಿಗೆ ದರ್ಶನ ನೀಡಲಿವೆ. ತಮ್ಮ ತಮ್ಮ ಇಷ್ಟಾರ್ಥಗಳು ಈಡೇರಿದ ಕಾರಣ, ಹಲವು ಭಕ್ತರು ಕೆಂಡ ಹಾಯ್ದು ಹರಕೆ ತೀರಿಸುತ್ತಾರೆ. ವಿವಿಧ ಸಿಹಿ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತಿ ಮೆರೆಯುತ್ತಾರೆ.
ನಮ್ಮೂರಲ್ಲಿ ಜಾತಿ ಭೇದವಿಲ್ಲ. ಇಲ್ಲಿ ಪೂರ್ವಜರ ಕಾಲದಿಂದಲೂ ಎಲ್ಲ ಧರ್ಮದವರು ಸೇರಿಕೊಂಡು ಮೊಹರಂ ಆಚರಿಸುತ್ತ ಬಂದಿದ್ದೇವೆ' ಎನ್ನುತ್ತಾರೆ ಸ್ಥಳೀಯರಾದ ಮಹಾದೇವಪ್ಪ ಭೊವಿ ಮತ್ತು ಮದಾರ ಚಾಂದಖಾನವರ.
ಯರಗಟ್ಟಿ ಪಟ್ಟಣದಲ್ಲಿ ಸೌಹಾರ್ದದಿಂದ ಮೊಹರಂ ಆಚರಿಸುವ ಪರಂಪರೆಯಿದೆ. ಈ ಬಾರಿಯೂ ಎಲ್ಲರೂ ಒಂದಾಗಿ ಧಾರ್ಮಿಕ ಆಚರಣೆ ಕೈಗೊಳ್ಳುತ್ತಿದ್ದೇವೆ.
ಅಜೀತಕುಮಾರ ದೇಸಾಯಿ
ಪಟ್ಟಣ ಪಂಚಾಯತ ನಾಮನಿರ್ದೇಶಿತ ಸದಸ್ಯರು, ಯರಗಟ್ಟಿ