ದಮನಿತರ ಸಾಹಸ ಶೌರ್ಯ ಅನಾವರಣಗೊಳಿಸಿದ ಯ.ರು.ಪಾಟೀಲ
ಲೋಕದರ್ಶನ ವರದಿ
ಬೆಳಗಾವಿ 06: ಸ್ವಾತಂತ್ರ್ಯ ಸಂದರ್ಭದಲ್ಲಿ ತಳಸಮುದಾಯ ಶ್ರಮಿಕರ ತ್ಯಾಗ ಬಲಿದಾನ ಬಹಳವಾಗಿದೆ. ಆದರೆ ಇಂತಹ ಮಹನೀಯರು ಬೆಳಕಿಗೆ ಬಾರದೇ ಅವರ ಚರಿತ್ರೆ ಕತ್ತಲೆಯಲ್ಲಿಯೇ ಉಳಿದಿದ್ದು, ಅಕ್ಷರ ಬಲ್ಲವರ ಚರಿತ್ರೆ ಮಾತ್ರ ದಾಖಲೆಯಾಗಿ ಬೆಳಕಿಗೆ ಬಂದಿವೆ. ಇಂತಹವರ ಪೈಕಿ ಬೆಳವಡಿಯ ವಡ್ಡರ ಯಲ್ಲಣ್ಣ ಪ್ರಮುಖ ವ್ಯಕ್ತಿ. ಈತನ ಕುರಿತು ಅಚ್ಚುಕಟ್ಟಾದ ಕಾದಂಬರಿ ಬರೆಯುವ ಮೂಲಕ ಬೆಳಕಿಗೆ ತಂದ ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರರೆಂದೇ ಹೆಸರಾದ ಯ.ರು.ಪಾಟೀಲರು ಅಭಿನಂದನಾರ್ಹರು ಎಂದು ವಿಧಾನ ಪರಿಷತ್ತ ಮಾಜಿ ಮುಖ್ಯ ಸಚೇತಕರು ಹಾಗೂ ಕೆ.ಎಲ್.ಇ. ಉಪಾಧ್ಯಕ್ಷ ಮಹಾಂತೇಶ ಕವಟಗಿಮಠ ಅವರು ಹೇಳಿದರು.
ವಡ್ಡರ ಯಲ್ಲಣ್ಣ ಯುವ ವೇದಿಕೆ ಹಾಗೂ ನೆಹರು ನಗರದ ಕನ್ನಡ ಭವನ ವತಿಯಿಂದ ಬೆಳಗಾವಿ ಮಹಾನಗರ ಮಟ್ಟದ ವಡ್ಡರ ಸಮಾಜ ಸಮಾವೇಶ ನಿಮಿತ್ಯ ಚಾರಿತ್ರಿಕ ಕಾದಂಬರಿಕಾರರು ನಿವೃತ್ತ ತಹಸೀಲದಾರ ಯ.ರು.ಪಾಟೀಲರವರು ರಚಿಸಿದ ‘ನೆಲದೊಡಲ ಧ್ವನಿ ಶೂರ ಬೆಳವಡಿ ವಡ್ಡರ ಯಲ್ಲಣ್ಣ’ ಕಾದಂಬರಿಯನ್ನು ಜನಾರೆ್ಣಗೊಳಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಡ್ಡರ ಸಮಾಜದ ಪ್ರಧಾನ ಕಾರ್ಯದರ್ಶಿ ಡಾ. ಚೌಡಯ್ಯನವರು ಮಾತನಾಡುತ್ತ, ನಮ್ಮ ಸಮಾಜದ ಜನರಿಗೆ ನಮ್ಮ ಶೂರರ ಪರಿಚಯವಿಲ್ಲದ ಸಂದರ್ಭದಲ್ಲಿ 35 ವರ್ಷದಿಂದ ಗೆಳೆತನವಿರುವ ಯ.ರು.ಪಾಟೀಲರವರು ವಡ್ಡರ ಯಲ್ಲಣ್ಣನ ಕುರಿತು ಕೃತಿ ಬರೆದು ಮಹದುಪುಕಾರ ಮಾಡಿದ್ದಾರೆಂದು ಹೇಳುತ್ತ, ವಡ್ಡರ ಸಂಘಟನೆ, ಸರಕಾರದಿಂದ ಸಿಗುವ ಸೌಲಭ್ಯ, ಹಾಗೂ ಸಮಾಜದ ತವಕ ತಲ್ಲಣಗಳನ್ನು ಸಂಕ್ಷಿಪ್ತವಾಗಿ ಹೇಳಿದರು.