ಶಿಗ್ಗಾವ್

ಲಿಂ. ರುದ್ರಮಿನಿ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ

ಲಿಂ. ರುದ್ರಮಿನಿ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ

ಶಿಗ್ಗಾವಿ 08: ಧರ್ಮ, ಸಂಸ್ಕೃತಿ, ಪರಂಪರೆ, ಆದರ್ಶಗಳನ್ನು ಉಳಿಸಿಕೊಂಡು ಬಂದಂತ ಕೀರ್ತಿ ಲಿಂ. ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರಿನ ರಂಬಾಪುರಿ ಪೀಠದ ಜ. ಡಾ. ವೀರಸೋಮೇಶ್ವರ ಸ್ವಾಮಿಜೀ ಹೇಳಿದರು. 

ತಾಲೂಕಿನ ಬಂಕಾಪೂರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಲಿಂ. ರುದ್ರಮಿನಿ ಶಿವಾಚಾರ್ಯ ಮಹಾಸ್ವಾಮಿಗಳವರ 47 ನೇ ಪುಣ್ಯಾರಾಧನೆ ಸಮಾರಂಭದ  ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಅಗಲಿ ಹೊದವರೆಲ್ಲರ ಪುಣ್ಯ ಸ್ಮರಣೆ ಮಾಡಲಾಗುವುದಿಲ್ಲ. ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹಾತ್ಮರ ಪುಣ್ಯ ಸ್ಮರಣೆಯನ್ನು ಮಾತ್ರ ಮಾಡಲಾಗುತ್ತಿದೆ. ಅಂತಹ ಮಹಾತ್ಮರು, ಶಿವ ಶರಣರು ಕಾಲವಾದ ನಂತರವೂ ಕೂಡಾ ಜೀವಂತವಾಗಿರುತ್ತಾರೆ. ಮನುಷ್ಯ ಎಷ್ಟೇ ಸಿರಿ, ಸಂಪತ್ತು ಗಳಿಸಿದರೂ ಕೂಡಾ ನೆಮ್ಮದಿ ಕಾಣಲಾರ. ಆಧ್ಯಾತ್ಮ ಸಂಪತ್ತನ್ನು ಮೈಗೂಡಿಸಿಕೊಂಡಾತ ಮಾತ್ರ ಶಾತಿ ನೆಮ್ಮದಿಯನ್ನು ಕಾಣಬಹುದಾಗಿದೆ. ವಿಜ್ಞಾನ, ತಂತ್ರಜ್ಞಾನ ದಲ್ಲಿ ಸಿಗಲಾರದ ಶಾಂತಿ ನೆಮ್ಮದಿ ಆಧ್ಯಾತ್ಮದಿಂದ ಲಭಿಸಲಿದೆ ಎಂದು ಹೇಳಿದರು.

ಇಂದಿನ ದಿನಮಾನದಲ್ಲಿ ಜಾತಿ ಸಂಘರ್ಷ ತಾರಕಕ್ಕೇರಿರುವುದು ವಿಷಾದದ ಸಂಗತಿಯಾಗಿದೆ. ಸರ್ವ ಸಮಾಜದ ಬೇಡಿಕೆಗಳನ್ನು ಸರಕಾರ ಯಾವ ರೀತಿ ನಿಭಾಯಿಸಬೇಕೆಂಬುದು ಪ್ರಜ್ಞಾವಂತ ಜನತೆ ಅರಿಯುವ ಅವಶ್ಯಕತೆಯಿದೆ. ಸಂವಿಧಾನ ಬದ್ಧವಾದ ಹಕ್ಕನ್ನು ಪಡೆಯುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಆದರೆ ಅದನ್ನು ಹೋರಾಟದಿಂದಲೇ ಪಡೆಯಬೇಕೆಂಬುದಿಲ್ಲ. ಅದನ್ನು ಶಾಂತಿ ನೆಮ್ಮದಿ, ಮಾತುಕತೆಯಿಂದ ಪಡೆಯಬಹುದಾಗಿದೆ ಎಂದು ಹೇಳಿದರು.

ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀಗಳು, ನೆಗಳೂರು ಸಂಸ್ಥಾನಮಠದ ಗುರುಶಾಂತೇಶ್ವರ ಶ್ರೀಗಳು, ಮಳಲಿ ಡಾ.ಗುರುನಾಗಭೂಷಣ ಶ್ರೀಗಳು ಮಾತನಾಡಿದರು.

ಶ್ರೀಮಠದಿಂದ ರುದ್ರಮುನಿಶ್ವರ ಸಂಪದ ಪ್ರಶಸ್ತಿಯನ್ನು ಸಮಾಜಸೇವಕ  ಶಶೀಧರ ಯಲಿಗಾರ ಅವರಿಗೆ ಪ್ರದಾನ ಮಾಡಲಾಯಿತು. ಡಾ. ಎಮ್.ಎಮ್.ತಿರ್ಲಾಪುರ ಹಾಗೂ ಡಾ. ರಾಣಿ ತಿರ್ಲಾಪುರ ರವರ ಸಮಾಜ ಸೇವೆಯನ್ನು ಪರಿಗಣಿಸಿ ಶ್ರೀಮಠದಿಂದ ಗುರುರಕ್ಷೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ನೇಯ್ಗೆ ನುಡಿ ಮಾಸಪತ್ರಿಕೆಯನ್ನು ರಂಬಾಪುರಿ ಶ್ರೀಗಳು ಬಿಡುಗಡೆಗೊಳಿಸಿದರು.

ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಅರೆತಲೆಗಡ್ಡಿ ಶಿವಾನಂದ ಶಿವಾಚಾರ್ಯರು, ಹಾವೇರಿ ಬಣ್ಣದಮಠದ ಅಭಿನವರುದ್ರ ಮಲ್ಲಿಕಾರ್ಜುನ ಶ್ರೀಗಳು, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯರು,  ಸೇರಿದಂತೆ ಇತರ ಗಣ್ಯಮಾನ್ಯರು ಇದ್ದರು. ಡಾ. ಆರ್.ಎಸ್.ಅರಳೆಲೆಮಠ ಸ್ವಾಗತಿಸಿದರು. ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ರೈತ ದ್ವನಿ ಚಾನಲ್   ಮುಖಾಂತರ ನಾಡಿಗೆ ಬಿತ್ತರಿಸಿತು.

ಸುದ್ದಿ ಓದಿ