ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿಸಿದ್ದಾಳೆ: ಶಕುಂತಲಾ
ಶಿಗ್ಗಾವಿ 09: ಶಕ್ತಿಸ್ವರೂಪಿಯಾದ ಮಹಿಳೆ ಇವತ್ತು ಪುರುಷನಿಗೆ ಹೆಗಲೆಣೆಯಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾಳೆ ಎಂದು ವಚನನಿಧಿ ವನಿತಾ ಸಂಘದ ಉಪಾಧ್ಯೆಕ್ಷೆ ಶಕುಂತಲಾ ಕೋಣನವರ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಮಾತನಾಡಿ ಸ್ತ್ರೀ ಎಲ್ಲಿ ಗೌರವಿಸಲ್ಪಡುತ್ತಾಳೆಯೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ ಎಂಬುದು ಆರ್ಯೋಕ್ತಿ ಆ ಹಿನ್ನೆಲೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸುತ್ತಿರುವ ಈ ಸಂದರ್ಭ ಅತ್ಯಂತ ಸಂತಸದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಶತಶತಮಾನಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಮಹಿಳೆ ಇವತ್ತು ಎಲ್ಲ ರಂಗಗಳಲ್ಲಿಯೂ ತನ್ನ ಪ್ರಭಾವವನ್ನು ಬೆಳೆಸಿಕೊಂಡು ಪುರುಷನಿಗೆ ಸರಿಸಮವಾಗಿ ಬಾಳುತ್ತಿದ್ದಾಳೆ ಎಂದ ಅವರು ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಕೈವಾಡ ಇರುತ್ತದೆ ಎಂಬುದು ಸತ್ಯಕ್ಕೂ ಸತ್ಯವಾದುದು ಎಂದು ಅಭಿಪ್ರಾಯ ಪಟ್ಟರು.
ಸನ್ಮಾನ ಸ್ವೀಕರಿಸಿ ಸನ್ಮಾನಿತರ ಪರವಾಗಿ ಮಾತನಾಡಿದ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿ ಜಿ.ಎಂಅರಗೋಳ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಕೆಲಸ ಮಾಡುವ ಸಂಸ್ಥೆಯಲ್ಲಿ ನಮ್ಮನ್ನು ಗೌರವಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಮಹಿಳೆಯರನ್ನು ಗೌರವಿಸುತ್ತಿರುವ ಈ ಸಂಸ್ಥೆ ಮಾದರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯರಾದ ಸಿ.ಟಿ. ಪಾಟೀಲ, ಎಂ.ಬಿ. ನೀರಲಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಜಿ. ಎಂ. ಅರಗೋಳ, ಎಸ್. ಎಸ್. ಘೋಢಗೇರಿ, ಆರ್. ವ್ಹಿ. ಹಿರೇಗೌಡ್ರ, ಕೆ. ಎಲ್. ಯಲವಿಗಿ, ಪಿ. ಎಫ್. ಯತ್ನಳ್ಳಿ, ಎ.ಎಂ. ಕಲಾಯಗಾರ, ಡಿ.ಎ. ವಡ್ಡರ, ಸುಮಿತ್ರಾ ರಾಮಾಪುರಮಠ, ಅನ್ನಪೂರ್ಣಾ ಅಂಕಲಕೋಟಿ, ಕೆ.ಪಿ. ಪಾಟೀಲ, ಶ್ವೇತಾ ನಾಗರಳ್ಳಿ, ರೇಣುಕಾ ಪಾಳೇದ, ಎಸ್. ಎ. ಹೊಳೆಹೊನ್ನೂರಮಠ, ಹಾಗೂ ಎಸ್. ಎಸ್. ಜೋಷಿ ಇವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಅನಿಲ ನಾಯ್ಕರ ಸ್ವಾಗತಿಸಿದರು, ಶಿಕ್ಷಕ ಕೆ.ಜಿ.ಮಲ್ಲೂರ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಎಂ. ಎ. ಗಾಣಿಗೇರ ವಂದಿಸಿದರು.